ಕಲ್ಲಿದ್ದಲು ಕೊರತೆ: ವಿದ್ಯುತ್ ಅಭಾವ ಎದುರಿಸುತ್ತಿರವ ರಾಜ್ಯಗಳಿಗೆ ದುಪ್ಪಟ್ಟು ಹಣ ತೆತ್ತು ಖರೀದಿಸುವ ಅನಿವಾರ್ಯತೆ

ವಿದ್ಯುತ್ ಅಭಾವ ಎದುರಿಸುತ್ತಿರುವ ಹಲವು ರಾಜ್ಯಗಳಿಗೆ ದುಪ್ಪಟ್ಟು ಹಣ ತೆತ್ತು ಕಲ್ಲಿದ್ದಲನ್ನು ಖರೀದಿಸುವ ಅನಿವಾರ್ಯತೆ ಉಂಟಾಗಿದೆ.
ಕಲ್ಲಿದ್ದಲು (ಸಂಗ್ರಹ ಚಿತ್ರ)
ಕಲ್ಲಿದ್ದಲು (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರ ಕಲ್ಲಿದ್ದಲು ಕೊರತೆಯನ್ನು ನೀಗಿಸಿ ಥರ್ಮಲ್ ಪವರ್ ಘಟಕಗಳಲ್ಲಿ ಎಂದಿನ ಸ್ಥಿತಿಯನ್ನು ಮರಳಿಸುವುದಕ್ಕೆ ಯತ್ನಿಸುತ್ತಿದೆ. ಆದರೆ ವಿದ್ಯುತ್ ಅಭಾವ ಎದುರಿಸುತ್ತಿರುವ ಹಲವು ರಾಜ್ಯಗಳಿಗೆ ದುಪ್ಪಟ್ಟು ಹಣ ತೆತ್ತು ಕಲ್ಲಿದ್ದಲನ್ನು ಖರೀದಿಸುವ ಅನಿವಾರ್ಯತೆ ಉಂಟಾಗಿದೆ.

ರಾಜ್ಯಗಳಲ್ಲಿ ಲೋಡ್ ಶೆಡ್ಡಿಂಗ್ ನ್ನು ತಪ್ಪಿಸುವುದಕ್ಕಾಗಿ ರಾಷ್ಟ್ರೀಯ ವಿನಿಮಯದಿಂದ ರಾಜ್ಯ ಸರ್ಕಾರಗಳು ದುಪ್ಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚು ಹಣವನ್ನು ನೀಡಿ ಕಲ್ಲಿದ್ದಲನ್ನು ಖರೀದಿಸಿ ಬಳಕೆ ಮಾಡುತ್ತಿವೆ.

15 ನಿಮಿಷಗಳ ರಿಯಲ್ ಟೈಮ್ ಬ್ಲಾಕ್ ಗಳಿಗೆ ಭಾರತೀಯ ವಿದ್ಯುತ್ ವಿನಿಮಯದಿಂದ ವಾಸ್ತವದ ಮಾರಾಟಕ್ಕೂ 1.5 ಗಂಟೆಗಳ ಮುಂಚೆ ಟೆಂಡರ್ ನ್ನು ಕರೆಯಲಾಗಿದೆ. ಈ ಕ್ರಮದ ಮೂಲಕ ಖರೀದಿಸುವ ಪ್ರತಿ ಯುನಿಟ್ ಕಲ್ಲಿದ್ದಲಿಗೆ 5-6 ರೂಪಾಯಿಗಳ ಬೆಲೆ ಇದೆ. ಆದರೆ ಕಲ್ಲಿದ್ದಲು ಬಿಕ್ಕಟ್ಟು ಹೆಚ್ಚಾಗಿರುವ ಪರಿಣಾಮ ಪ್ರತಿ ಯುನಿಟ್ ನ ಕಲ್ಲಿದ್ದಲು ದರ 20 ರೂಪಾಯಿಗಳಿಗೆ ಏರಿಕೆಯಾಗಿದೆ. 

ಆಂಧ್ರಪ್ರದೇಶ ಅ.13 ರಂದು 2,102 ಮೆಗಾ ವ್ಯಾಟ್ ನ ಪೀಕ್ ಅವರ್ (a peak hour) ಬ್ಲಾಕ್ ನ್ನು 15 ನಿಮಿಷಗಳವರೆಗೆ ಅಂದರೆ ಸಂಜೆ 6.30 ರಿಂದ 6:45 ವರೆಗೆ ಪ್ರತಿ ಯುನಿಟ್ ಗೆ 20 ರೂಪಾಯಿ ನೀಡಿ ಖರೀದಿಸಿತ್ತು. ಇದೇ ಮೊತ್ತಕ್ಕೆ ಮತ್ತೊಮ್ಮೆ ಸಂಜೆ 7:00 ರಿಂದ 7:15 ವರೆಗೆ ಖರೀದಿಸಿತ್ತು. ಇದಕ್ಕೂ ಮುನ್ನ ಮಂಗಳವಾರದಂದು 2,000 ಮೆಗಾ ವ್ಯಾಟ್ ನ್ನು ಎರಡು ಬಾರಿ ತಲಾ 15 ನಿಮಿಷಗಳಂತೆ ರೂಪಾಯಿ 20 ಕ್ಕೆ ಖರೀದಿಸಿತ್ತು. ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳಿಂದ ಹಾಗೂ ವಿನಿಮಯಗಳಿಂದ ಪ್ರತಿ ದಿನ ಆಂಧ್ರಪ್ರದೇಶ 28-40 ಮಿಲಿಯನ್ ಯುನಿಟ್ ಗಳಷ್ಟು ವಿದ್ಯುತ್ ನ್ನು ಸರಾಸರಿ ಖರೀದಿಸುತ್ತದೆ. 

ಕೇರಳ ಸಹ ರಿಯಲ್ ಟೈಮ್ ಖರೀದಿಯ ಮೊರೆ ಹೋಗಿದ್ದು ಪ್ರತಿ ದಿನ ವಿನಿಮಯದಿಂದ 0.4-1.10 ಮಿಲಿಯನ್ ಯುನಿಟ್ ಗಳಷ್ಟನ್ನು ಪ್ರತಿ ಯುನಿಟ್ ಗೆ 20 ರೂಪಾಯಿಗಳಂತೆ ಖರೀದಿಸುತ್ತಿದೆ.

ರಾಜಸ್ಥಾನ 4 ಕೋಟಿ ಯುನಿಟ್ ಗಳಷ್ಟು ವಿದ್ಯುತ್ ನ್ನು ಪ್ರತಿ ದಿನ ಪ್ರತಿ ಯುನಿಟ್ ಗೆ 15-20 ರೂಪಾಯಿಗಳವರೆಗೆ ನೀಡಿ ಖರೀದಿಸುತ್ತಿದೆ. ಇದರಿಂದ ದಿನವೊಂದಕ್ಕೆ 80 ಕೋಟಿ ರೂಪಾಯಿ ಖರ್ಚಾಗುತ್ತಿದೆ. ಸಾಮಾನ್ಯದ ದಿನಗಳಲ್ಲಿ ಯುನಿಟ್ ಗೆ 3-4 ರೂಪಾಯಿ ಖರ್ಚಾಗುತ್ತದೆ.

ಇನ್ನು ಬಿಹಾರ ಸಿಎಂ ಹಬ್ಬದ ದಿನಗಳಲ್ಲಿ ನಿರಂತರ ಕರೆಂಟ್ ನ್ನು ನೀಡುವುದಾಗಿ ಘೋಷಿಸಿದ್ದು, ಕೊರತೆಯನ್ನು ನೀಗಿಸುವುದಕ್ಕೆ ಪ್ರತಿ ಯುನಿಟ್ ಗೆ 20 ರೂಪಾಯಿಗಳಂತೆ 1,200 ಮೆಗಾವ್ಯಾಟ್ ವಿದ್ಯುತ್ ನ್ನು ಖರೀದಿಸುತ್ತಿದೆ. ಕಳೆದ 13 ದಿನಗಳಿಂದ ಪಂಜಾಬ್ ಸರ್ಕಾರ 282 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ವಿದ್ಯುತ್ ಖರೀದಿಸುತ್ತಿದೆ.

ಕೆಲವು ರಾಜ್ಯಗಳಿಂದ ಹೆಚ್ಚಾದ ವಿದ್ಯುತ್ ಗ್ರಿಡ್ ಗೆ ಮಾರಾಟ

ಇದಕ್ಕೆ ಸಂಪೂರ್ಣ ತದ್ವಿರುದ್ಧವೆಂಬಂತೆ ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳವಾಗಿದ್ದು, ಕರ್ನಾಟಕ ವಿದ್ಯುತ್ ನ್ನು ಗ್ರಿಡ್ ಗೆ ಮಾರಾಟ ಮಾಡುತ್ತಿದೆ. 

ಕರ್ನಾಟಕ ಲಿಮಿಟೆಡ್ ನ ವಿದ್ಯುತ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು ಸೋಲಾರ್ ವಿದ್ಯುತ್ ನ ಮಾರಾಟದ ದರ ಇಂಡಿಯನ್ ಎಲೆಕ್ಟ್ರಿಸಿಟಿ ಎಕ್ಸ್ಚೇಂಜ್ ಹಾಗೂ ಪವರ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮೇಲೆ ಅವಲಂಬಿತವಾಗಿದ್ದು ಪ್ರತಿ 15 ನಿಮಿಷಕ್ಕೊಮ್ಮೆ ವ್ಯತ್ಯಯವಾಗುತ್ತಿರುತ್ತದೆ.

ಕರ್ನಾಟಕದಂತೆಯೇ ಒಡಿಶಾ, ತೆಲಂಗಾಣ ಸರ್ಕಾರಗಳೂ ಇದ್ಯುತ್ ನ್ನು ಪೀಕ್ ಅವರ್ ಗಳಲ್ಲಿ ಮಾರಾಟ ಮಾಡುತ್ತಿವೆ. ಒಡಿಶಾ ಗುರುವಾರದಂದು 500 ಮೆಗಾ ವ್ಯಾಟ್ ವಿದ್ಯುತ್ ಮಾರಾಟ ಮಾಡಿದ್ದರೆ, ತೆಲಂಗಾಣ ಸರ್ಕಾರ ವಿದ್ಯುತ್ ನ್ನು ಕಳೆದ 2 ತಿಂಗಳಿನಿಂದ ವಿದ್ಯುತ್ ಮಾರಾಟ ಮಾಡುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com