ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಮಹತ್ವದ ಮೈಲಿಗಲ್ಲು: ದೇಶದಲ್ಲಿ 100 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿಕೆ
ಕೋವಿಡ್-19 ಪಿಡುಗಿನ ವಿರುದ್ಧ ದೇಶಾದ್ಯಂತ ಆರಂಭವಾದ ಲಸಿಕಾ ಅಭಿಯಾನದಡಿ ಗುರುವಾರ 100 ಕೋಟಿ ಗೂ ಅಧಿಕ ಡೋಸ್ ಲಸಿಕೆ ನೀಡುವ ಮೂಲಕ ಮಹತ್ವದ ಮೈಲುಗಲ್ಲಿನ ಸಾಧನೆ ಮಾಡಿದೆ.
Published: 21st October 2021 11:14 AM | Last Updated: 21st October 2021 05:41 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್-19 ಪಿಡುಗಿನ ವಿರುದ್ಧ ದೇಶಾದ್ಯಂತ ಆರಂಭವಾದ ಲಸಿಕಾ ಅಭಿಯಾನದಡಿ ಗುರುವಾರ 100 ಕೋಟಿ ಗೂ ಅಧಿಕ ಡೋಸ್ ಲಸಿಕೆ ನೀಡುವ ಮೂಲಕ ಮಹತ್ವದ ಮೈಲುಗಲ್ಲಿನ ಸಾಧನೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ, ಈ ಸಾಧನೆ ಮಾಡಿರುವುದಕ್ಕೆ ದೇಶವನ್ನು ಅಭಿನಂದಿಸಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದ ಫಲವಾಗಿದೆ ಎಂದಿದ್ದಾರೆ.
बधाई हो भारत!
— Dr Mansukh Mandaviya (@mansukhmandviya) October 21, 2021
दूरदर्शी प्रधानमंत्री श्री @NarendraModi जी के समर्थ नेतृत्व का यह प्रतिफल है।#VaccineCentury pic.twitter.com/11HCWNpFan
ಅಧಿಕೃತ ಮೂಲಗಳ ಪ್ರಕಾರ ದೇಶದ ಶೇಕಡ 75 ರಷ್ಟು ವಯಸ್ಕರು ಮೊದಲ ಡೋಸ್ ಪಡೆದಿದ್ದರೆ, ಶೇಕಡ 35 ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ.
85 ದಿನಗಳಲ್ಲಿ 10 ಕೋಟಿ ಡೋಸ್ ಲಸಿಕೆ ನೀಡಿದ್ದ ದೇಶದಲ್ಲಿ 45 ದಿನಗಳಲ್ಲಿ 20 ಕೋಟಿ ಗೂ ಅಧಿಕ ಮತ್ತು 29 ದಿನಗಳಲ್ಲಿ 30 ಕೋಟಿ ಗೂ ಅಧಿಕ ಡೋಸ್ ಲಸಿಕೆ ನೀಡಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 24 ದಿನಗಳಲ್ಲಿ 30 ರಿಂದ 40 ಕೋಟಿ, ತದನಂತರದ 20 ದಿನಗಳಲ್ಲಿ ಆಗಸ್ಟ್ 6 ರಂದು 50 ಕೋಟಿ ಡೋಸ್ ಲಸಿಕೆ ನೀಡಿಕೆಯ ಸಾಧನೆ ಮಾಡಲಾಗಿತ್ತು ಎಂದು ತಿಳಿಸಿದೆ.
ತದನಂತರ 76 ದಿನಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಡೋಸ್ ನೀಡಲಾಗಿದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದರೊಂದಿಗೆ ಜನವರಿ 16 ರಿಂದ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿತ್ತು. ಫೆಬ್ರವರಿ 2 ರಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ, ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 45 ವರ್ಷಕ್ಕೂ ಮೇಲ್ಪಟ್ಟ ದುರ್ಬಲ ವರ್ಗದವರಿಗೆ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿತ್ತು.
ಏಪ್ರಿಲ್ 1 ರಿಂದ 45 ವರ್ಷದೊಳಗಿನ ಎಲ್ಲಾ ಜನರಿಗೂ ದೇಶಾದ್ಯಂತ ಲಸಿಕೆ ನೀಡಿಕೆ ಪ್ರಾರಂಭವಾಗಿತ್ತು. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೂ ಲಸಿಕೆ ನೀಡುವಿಕೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.