
ಸುಧಾ ಚಂದ್ರನ್
ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಶುಕ್ರವಾರ ಖ್ಯಾತ ನಟಿ ಹಾಗೂ ನೃತ್ಯಪಟು ಸುಧಾ ಚಂದ್ರನ್ ಅವರ ಕ್ಷಮೆ ಕೇಳಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅವರ ಕೃತಕ ಕಾಲನ್ನು ಬಿಚ್ಚಿ ತೋರಿಸುವಂತೆ ಸೂಚಿಸುವ ಮೂಲಕ ಅವಮಾನ ಮಾಡಲಾಗಿತ್ತು. ಈ ಸಂಬಂಧ ಸಿಐಎಸ್ಎಫ್ ಇಂದು ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ.
"ಶ್ರೀಮತಿ ಸುಧಾ ಚಂದ್ರನ್ ಅವರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಪ್ರೋಟೋಕಾಲ್ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಭದ್ರತಾ ತಪಾಸಣೆಗಾಗಿ ಪ್ರಾಸ್ಥೆಟಿಕ್ಸ್ ಅನ್ನು ತೆಗೆದುಹಾಕಲಾಗುತ್ತದೆ. ಪ್ರಾಸ್ಥೆಟಿಕ್ಸ್ ಅನ್ನು ತೆಗೆದುಹಾಕಲು ಸಂಬಂಧಿಸಿದ ಮಹಿಳಾ ಸಿಬ್ಬಂದಿ ಶ್ರೀಮತಿ ಸುಧಾ ಚಂದ್ರನ್ ಅವರನ್ನು ಏಕೆ ವಿನಂತಿಸಿದರು ಎಂಬುದನ್ನು ನಾವು ಪರಿಶೀಲಿಸುತ್ತೇವೆ ಎಂದು ಸಿಐಎಸ್ಎಫ್ ತಿಳಿಸಿದೆ.
"ಪ್ರೋಟೋಕಾಲ್ ಪಾಲಿಸುವ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ನಮ್ಮ ಎಲ್ಲ ಸಿಬ್ಬಂದಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುವುದು ಎಂದು ನಾವು ಶ್ರೀಮತಿ ಸುಧಾ ಚಂದ್ರನಿ ಅವರಿಗೆ ಭರವಸೆ ನೀಡುತ್ತೇವೆ" ಎಂದು ಸಿಐಎಸ್‌ಎಫ್ ಟ್ವೀಟ್ ಮಾಡಿದೆ.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಉದ್ದೇಶದಿಂದ ತಮ್ಮ ಕೃತಕ ಕಾಲುಗಳನ್ನು ಪ್ರತಿ ಬಾರಿ ಬಿಚ್ಚಿ ತೋರಿಸಲು ಹೇಳುತ್ತಾರೆ. ಇದು ಬಹಳ ನೋವಾಗುತ್ತದೆ ಎಂದು ಸುಧಾ ಅವರು ಹೇಳಿಕೊಂಡಿದ್ದರು. ಈ ಕುರಿತು ವಿಡಿಯೋದಲ್ಲಿ ಮಾತನಾಡಿದ್ದ ಅವರು, ‘‘ಇದು ಅತ್ಯಂತ ವೈಯಕ್ತಿಕ ವಿಷಯವಾದರೂ, ಸರ್ಕಾರಕ್ಕೆ ಹಾಗೂ ನೆಚ್ಚಿನ ಪ್ರಧಾನಿಗಳ ಗಮನಕ್ಕೆ ತರುವ ಉದ್ದೇಶದಿಂದ ನಟಿ ಹಾಗೂ ನೃತ್ಯಪಟುವಾದ ನಾನು(ಸುಧಾ ಚಂದ್ರನ್) ವಿಡಿಯೋ ಮಾಡುತ್ತಿದ್ದೇನೆ. ಕೃತಕ ಕಾಲುಗಳ ಮುಖಾಂತರ ನೃತ್ಯ ಮಾಡಿ ಇತಿಹಾಸ ಸೃಷ್ಟಿಸಿದ ನಾನು ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದೇನೆ. ಆದರೆ ನಾನು ಕಾರ್ಯದ ನಿಮಿತ್ತ ಪ್ರತಿ ಬಾರಿ ವಿಮಾನ ನಿಲ್ದಾಣಗಳಿಗೆ ತೆರಳಿದಾಗಲೂ ಭದ್ರತಾ ತಂಡದವರು ನಿಲ್ಲಿಸುತ್ತಾರೆ. ಅವರಿಗೆ ನನ್ನ ಕೃತಕ ಕಾಲುಗಳನ್ನು ಇಟಿಡಿ (ಸ್ಫೋಟ ಪರಿಶೀಲನಾ ಸಾಧನ) ಮುಖಾಂತರ ಪರಿಶೀಲಿಸಿ ಎಂದು ಮನವಿ ಮಾಡಿಕೊಂಡರೂ, ಅವರು ಕೇಳದೇ- ಕೃತಕ ಕಾಲನ್ನು ತೆಗೆಸಿ ಪರಿಶೀಲಿಸುತ್ತಾರೆ’’ ಎಂದು ಸುಧಾ ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು.