ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪ: ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ವಿಚಾರಣೆಗೆ ಎನ್ ಸಿಬಿ ಆದೇಶ
ಮುಂಬೈ: ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಿಟ್ಟುಕಳಿಸುವುದಕ್ಕೆ 25 ಕೋಟಿ ರೂಪಾಯಿ ಸುಲಿಗೆ (ಲಂಚ)ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಸಿ ಬಿ ಮುಂಬೈ ನ ತನ್ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದೆ.
ನಾರ್ಕೊಟಿಕ್ಸ್ ನಿಯಂತ್ರಕ ಬ್ಯೂರೋ (ಎನ್ ಸಿಬಿ) ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ ಈ ಸುಲಿಗೆ ಆರೋಪ ಕೇಳಿಬಂದಿತ್ತು.
ಎನ್ ಸಿಬಿಯ ಪ್ರಧಾನ ಉಪನಿರ್ದೇಶಕ, ಮುಖ್ಯ ವಿಜಿಲೆನ್ಸ್ ಅಧಿಕಾರಿ (ಸಿವಿಒ) ಆಗಿರುವ ಗ್ಯಾನೇಶ್ವರ್ ಸಿಂಗ್ ಅವರು ತನಿಖೆ ನಡೆಸಲಿದ್ದಾರೆ.
ಪ್ರಭಾಕರ್ ಸೈಲ್ ಎಂಬಾತ ಕ್ರೂಸ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆರ್ಯನ್ ಖಾನ್ ನ್ನು ಈ ಪ್ರಕರಣದಿಂದ ಕೈಬಿಡಲು ಎನ್ ಸಿಬಿ ಅಧಿಕಾರಿ ಹಾಗೂ ಇತರರು 25 ಕೋಟಿ ರೂಪಾಯಿ ಕೇಳಿದ್ದರು ಎಂಬ ಗಂಭೀರ ಆರೋಪವನ್ನು ಅ.24 ರಂದು ಮಾಡಿದ್ದರು.
ಸೈಲ್ ತಾನು ಈ ಪ್ರಕರಣದ ಮತ್ತೋರ್ವ ಸಾಕ್ಷಿದಾರ ಹಾಗೂ ಎನ್ ಸಿಬಿ ರೈಡ್ ನಂತರ ಕಣ್ಮರೆಯಾಗಿರುವ ಕೆಪಿ ಗೋಸಾವಿಗೆ ಬಾಡಿ ಗಾರ್ಡ್ ಎಂದೂ ಹೇಳಿಕೊಂಡಿದ್ದಾನೆ.
ಗೋಸಾವಿ ಶಾ ರೂಖ್ ಖಾನ್ ಅವರ ಮ್ಯಾನೇಜರ್ ನ್ನು ಭೇಟಿ ಮಾಡಿ ವಾಂಖೆಡೆ ಅವರ ಸಮ್ಮುಖದಲ್ಲಿ 9-10 ಬ್ಲಾಂಕ್ ಚೆಕ್ ಗಳಿಗೆ ಸಹಿ ಹಾಕಲು ಕೇಳುತ್ತಿದ್ದನ್ನು ತಾನು ನೋಡಿದ್ದೇನೆ ಎಂದು ಸೈಲ್ ಆರೋಪಿಸಿದ್ದಾರೆ.
ಈ ಆರೋಪದ ಬಗ್ಗೆ ಪ್ರಮಾಣಪತ್ರ ಹಾಗೂ ವರದಿಯನ್ನು ನಮ್ಮ ಡಿಡಿಜಿ (ವಾಯುವ್ಯ) ಅಧಿಕಾರಿಯಿಂದ ಪಡೆದಿದ್ದೇವೆ. ಎನ್ ಸಿಬಿ ನಿರ್ದೇಶಕರು ಈ ಆರೋಪವನ್ನು ಗಮನಿಸಿದ್ದು, ವಿಜಿಲೆನ್ಸ್ ವಿಭಾಗಕ್ಕೆ ತನಿಖೆಗಾಗಿ ಕಳಿಸಿದ್ದಾರೆ. ನಮ್ಮದು ವೃತ್ತಿಪರ ಸಂಸ್ಥೆ, ನಮ್ಮ ಯಾವುದೇ ಸಿಬ್ಬಂದಿಗಳ ವಿರುದ್ಧ ಯಾವುದೇ ಆರೋಪ ಬಂದರೂ ತನಿಖೆಗೆ ನಾವು ಮುಕ್ತರಾಗಿದ್ದೇವೆ" ಎಂದು ಗ್ಯಾನೇಶ್ವರ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ