'ನನ್ನ ಹೆಸರು ಜ್ಞಾನದೇವ್, ದಾವೂದ್ ಅಲ್ಲ': ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿಕೆಗೆ ಸಮೀರ್ ವಾಂಖೆಡೆ ತಂದೆ ಸ್ಪಷ್ಟನೆ

ತಮ್ಮ ಹೆಸರು ಜ್ಞಾನದೇವ್ ಆಗಿದ್ದು, ಎನ್ ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಹೇಳಿರುವಂತೆ ದಾವೂದ್ ಅಲ್ಲ ಎಂದು ಮುಂಬೈ ವಲಯ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಯ ತಂದೆ ಹೇಳಿದ್ದಾರೆ.
ಸಮೀರ್ ವಾಂಖೆಡೆ, ನವಾಬ್ ಮಲಿಕ್
ಸಮೀರ್ ವಾಂಖೆಡೆ, ನವಾಬ್ ಮಲಿಕ್

ಮುಂಬೈ: ತಮ್ಮ ಹೆಸರು ಜ್ಞಾನದೇವ್ ಆಗಿದ್ದು, ಎನ್ ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಹೇಳಿರುವಂತೆ ದಾವೂದ್ ಅಲ್ಲ ಎಂದು ಮುಂಬೈ ವಲಯ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಯ ತಂದೆ ಹೇಳಿದ್ದಾರೆ.

ಸುದ್ದಿ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ಪುತ್ರ ಸಮೀರ್ ವಾಂಖೆಡೆ ಅಭಿಮನ್ಯು ತರ, ಮಹಾಭಾರತದಲ್ಲಿ ಅಭಿಮನ್ಯು ಶತ್ರುಗಳ ಮಧ್ಯೆ ಸುತ್ತುವರಿದಿರುತ್ತಾನೆ. ಆದರೆ ನಂತರ ಚಕ್ರವ್ಯೂಹವನ್ನು ಭೇದಿಸಿ ಬಂದಂತೆ ತಮ್ಮ ಪುತ್ರ ಕೂಡ ಎಲ್ಲ ಸವಾಲು, ಸಮಸ್ಯೆಗಳನ್ನು ದಾಟಿ ಹೊರಬರುತ್ತಾನೆ ಎಂದರು.

ಸಚಿವ ನವಾಬ್ ಮಲಿಕ್ ಹೇಳಿಕೆಗೆ ತಿರುಗೇಟು ನೀಡಿರುವ ಸಮೀರ್ ವಾಂಖೆಡೆ ತಂದೆ, ನನ್ನ ಹೆಸರು ದಾವೂದ್ ವಾಂಖೆಡೆ ಎಂಬುದು ಶುದ್ಧ ಸುಳ್ಳು. ಸಮೀರ್ ವಾಂಖೆಡೆಯ ಜನ್ಮ ಪ್ರಮಾಣಪತ್ರ ಬಿಡುಗಡೆಯಲ್ಲಿ ಮಲಿಕ್ ಅವರ ದುರುದ್ದೇಶಪೂರಿತ ಉದ್ದೇಶವಿದೆ ಎಂದು ಅನಿಸುತ್ತಿದೆ. ನಮಗೆ ಕೆಟ್ಟ ಹೆಸರು ತರುವ ಉದ್ದೇಶವಿದೆ ಎನಿಸುತ್ತಿದೆ. ನನ್ನ ಹೆಸರು ಜ್ಞಾನೇಂದ್ರ ವಾಂಖೆಡೆ ಎಂದಾಗಿದ್ದು ಅದುವೇ ಇಂದಿಗೂ ಕೂಡ ಇದೆ ಎಂದು ಸ್ಪಷ್ಟನೆ ನೀಡಿದರು.

ಸಮೀರ್ ವಾಂಖೆಡೆ ತಂದೆ ಹೇಳಿದ್ದೇನು?: ನನ್ನ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿ ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ್ದೆ. ಹಾಗಾದರೆ ಯಾರಿಗೂ ನನ್ನ ಹೆಸರು ಜ್ಞಾನದೇವ್ , ದಾವೂದ್ ಅಲ್ಲ ಎಂದು ಯಾರಿಗೂ ಗೊತ್ತಿರಲಿಲ್ಲವೇ? ನವಾಬ್ ಮಲಿಕ್ ಗೆ ಮಾತ್ರ ಈ ರೀತಿ ಶಂಕಾಸ್ಪದ ದಾಖಲೆ ಸಿಕ್ಕಿದೆ ಎಂದು ಪ್ರಶ್ನಿಸಿದರು.

ನನ್ನ ಪತ್ನಿ ಆರು ವರ್ಷಗಳ ಹಿಂದೆ ತೀರಿಕೊಂಡರು. ಅಫಿಡವಿಟ್ಟಿನಲ್ಲಿ ಆಕೆ ನನ್ನ ಹೆಸರು ಜ್ಞಾನದೇವ್ ವಾಂಖೆಡೆ ಎಂದು ನಮೂದಿಸಿದ್ದರು. ನನ್ನ ಬಳಿ ಜಾತಿ ಸರ್ಟಿಫಿಕೇಟ್ ಕೂಡ ಇದೆ. ಕೇವಲ ನನ್ನೊಬ್ಬನಲ್ಲೇ ಅಲ್ಲ, ನನ್ನ ಸಂಬಂಧಿಕರಲ್ಲಿ ಕೂಡ ಅದೇ ದಾಖಲೆ ಇದೆ ಎಂದು ವಾಂಖೆಡೆ ಹೇಳುತ್ತಾರೆ.

ನಿನ್ನೆ ಹೇಳಿಕೆ ನೀಡಿದ್ದ ಸಮೀರ್ ವಾಂಖೆಡೆ ತಮ್ಮ ತಂದೆ ಜ್ಞಾನದೇವ್ ಕಚ್ರುಜಿ ವಾಂಖೆಡೆಯಾಗಿದ್ದು ರಾಜ್ಯ ಅಬಕಾರಿ ಇಲಾಖೆಯಿಂದ ಹಿರಿಯ ಪೊಲೀಸ್ ಅಧಿಕಾರಿಯಾಗಿ 2007ರಲ್ಲಿ ಪುಣೆಯಲ್ಲಿ ನಿವೃತ್ತಿ ಹೊಂದಿದರು. ತಮ್ಮ ತಂದೆ ಹಿಂದೂ ಆಗಿದ್ದು ತಾಯಿ ಝಹೀದಾ ಮುಸ್ಲಿಂ ಎಂದು ಸ್ಪಷ್ಟನೆ ನೀಡಿದ್ದರು.

ಸಮೀರ್ ವಾಂಖೆಡೆಯವರು ನಂತರ ತಾವು 2006ರಲ್ಲಿ ಡಾ ಶಬಾನಾ ಖುರೇಷಿಯವರನ್ನು ಮದುವೆಯಾಗಿದ್ದು ವಿಶೇಷ ವಿವಾಹ ಕಾಯ್ದೆಯಡಿ ಇಬ್ಬರೂ ಪರಸ್ಪರ ಒಪ್ಪಿ 2016ರಲ್ಲಿ ವಿಚ್ಛೇದನ ಪಡೆದುಕೊಂಡೆವು. ನಂತರ 2017ರಲ್ಲಿ ಕ್ರಾಂತಿ ರೆಡ್ಕರ್ ಅವರನ್ನು ವಿವಾಹವಾದೆನು ಎಂದು ಸ್ಪಷ್ಟನೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com