ಅನಾರೋಗ್ಯ ಎದುರಿಸುತ್ತಿದ್ದ ಮಗುವಿಗಾಗಿ ತಡವಾಗಿ ಹೊರಟ ಯಶ್ವಂತ್ ಪುರ-ಹೌರಾ ಡುರೊಂಟೋ ಎಕ್ಸ್ ಪ್ರೆಸ್ ರೈಲು
ಅನಾರೋಗ್ಯ ಎದುರಿಸುತ್ತಿದ್ದ 5 ವರ್ಷದ ಮಗುವಿಗೆ ನೆರವಾಗುವುದಕ್ಕಾಗಿ ಡುರೊಂಟೋ ಎಕ್ಸ್ ಪ್ರೆಸ್ (ಯಶ್ವಂತಪುರ- ಹೌರಾ) 27 ನಿಮಿಷಗಳಷ್ಟು ತಡವಾಗಿ ಹೊರಟಿದೆ.
Published: 26th October 2021 03:33 PM | Last Updated: 26th October 2021 04:31 PM | A+A A-

ರೈಲು (ಸಾಂಕೇತಿಕ ಚಿತ್ರ)
ಬೆಂಗಳೂರು: ಅನಾರೋಗ್ಯ ಎದುರಿಸುತ್ತಿದ್ದ 5 ವರ್ಷದ ಮಗುವಿಗೆ ನೆರವಾಗುವುದಕ್ಕಾಗಿ ಡುರೊಂಟೋ ಎಕ್ಸ್ ಪ್ರೆಸ್ (ಯಶ್ವಂತಪುರ- ಹೌರಾ) 27 ನಿಮಿಷಗಳಷ್ಟು ತಡವಾಗಿ ಹೊರಟಿದೆ.
ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವರಿಗಾಗಿ ರೈಲುಗಳನ್ನು ವಿಳಂಬ ಮಾಡುವುದು ಅತಿ ವಿರಳ. ಆದರೆ ಈ ಪ್ರಕರಣದಲ್ಲಿ ರೈಲ್ವೆ ಅಧಿಕಾರಿಗಳ ಮಾನವೀಯ ನೆಲೆಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗತೊಡಗಿದೆ.
ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಎ1 ಕೋಚ್ ನಲ್ಲಿ 5 ವರ್ಷದ ಮಗು ಜಯನಾಬ್ ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಮಗುವಿಗೆ ಆಕ್ಸಿಜನ್ ಸಿಲಿಂಡರ್ ಅಗತ್ಯವಿದ್ದ ಕಾರಣ, ಅದನ್ನು ವ್ಯವಸ್ಥೆ ಮಾಡುವ ಕಾರಣಕ್ಕಾಗಿ ರೈಲು ಹೊರಡುವುದು ವಿಳಂಬವಾಯಿತು" ಎಂದು ಹೇಳಿದ್ದಾರೆ.
ರೈಲು ನಂ.02246 ಸಾಮಾನ್ಯವಾಗಿ ಯಶವಂತಪುರದಿಂದ ಬೆಳಿಗ್ಗೆ 11 ಗಂಟೆಗೆ ಹೊರಡುತ್ತದೆ. ಆದರೆ ಆಕ್ಸಿಜನ್ ವ್ಯವಸ್ಥೆ ಮಾಡಬೇಕಿದ್ದರಿಂದ ಬೆಳಿಗ್ಗೆ 11.27 ಕ್ಕೆ ಹೊರಟಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿಯಾಗಿರುವ ಕೇದಾರನಾಥ್ ರೆಡ್ಡಿ (ಕೃಷಿ ರೈಲು, ಕಾರ್ಗೋ ಸಾಗಾಣಿಕೆಯ ಮಾಲಿಕ) ನೀಡಿರುವ ಮಾಹಿತಿಯ ಪ್ರಕಾರ ಆಸ್ಪತ್ರೆಯಿಂದ ಕರೆತರಲಾಗಿದ್ದ ಮಗು ಇದೇ ರೈಲಿನಲ್ಲಿ ಸಂಚರಿಸಬೇಕಿತ್ತು. ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಸ್ಟ್ರೆಚರ್ ನಲ್ಲಿ ಮಗುವನ್ನು ಕರೆತಂದು ಉಸಿರಾಟ ಸುಗಮಗೊಳ್ಳುವ ಸಾಧನವನ್ನು ಅಳವಡಿಸಲಾಗಿತ್ತು. ಮಗುವಿನ ಉಸಿರಾಟ ಸಹಜ ಸ್ಥಿತಿಗೆ ಬರುವವರೆಗೂ ಕಾದು ನಂತರ ರೈಲು ಹೊರಟಿತು" ಎಂದು ಹೇಳಿದ್ದಾರೆ.
ಈ ಘಟನೆಯ ದೃಶ್ಯಗಳನ್ನು ರೆಡ್ಡಿ ಅವರು ಟ್ವೀಟ್ ಮಾಡಿದ್ದು, ಎಸ್ ಡಬ್ಲ್ಯುಆರ್ ಬೆಂಗಳೂರು ತಂಡದ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗತೊಡಗಿದೆ.