ಮಧ್ಯಪ್ರದೇಶ: ಲವ್ ಜಿಹಾದ್ ಶಂಕೆ, ಅಪ್ರಾಪ್ತ ಬಾಲಕನಿಗೆ ಥಳಿತ

 ಲವ್ ಜಿಹಾದ್ ಶಂಕೆಯಲ್ಲಿ 16 ವರ್ಷದ ಬಾಲಕನಿಗೆ ಗುಂಪೊಂದು ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಲವ್ ಜಿಹಾದ್
ಲವ್ ಜಿಹಾದ್

ದೇವಸ್: ಲವ್ ಜಿಹಾದ್ ಶಂಕೆಯಲ್ಲಿ 16 ವರ್ಷದ ಬಾಲಕನಿಗೆ ಗುಂಪೊಂದು ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದ್ದು ಪೊಲೀಸರ ಸಮ್ಮುಖದಲ್ಲೇ ಗುಂಪು ಬಾಲಕನ ಮೇಲೆ ಹಲ್ಲೆ ನಡೆಸಿದ್ದು ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಗಿದ್ದಿಷ್ಟು. ಉತ್ತರ ಪ್ರದೇಶದ ಮೂಲದ 16 ವರ್ಷದ  ಹಿಂದೂ ಬಾಲಕನೋರ್ವ ತನ್ನದೇ ಸಮುದಾಯದ 12 ವರ್ಷದ ಬಾಲಕಿಯ ಜೊತೆ ಪರಾರಿಯಾಗಿದ್ದ. ಈ ಘಟನೆಯ ವಿಡಿಯೋ ವೈರಲ್ ಆಗತೊಡಗಿತ್ತು.

ಉತ್ತರ ಪ್ರದೇಶದ ಬಲ್ಲಿಯಾದಿಂದ ಈ ಜೋಡಿ ಪರಾರಿಯಾಗಿತ್ತು. ಈ ಮಾಹಿತಿ ಮಧ್ಯಪ್ರದೇಶದ ಪೊಲೀಸರಿಗೂ ಲಭ್ಯವಾಗಿ ಅವರಿಬ್ಬರ ಶೋಧಕಾರ್ಯಾಚರಣೆಗೆ ಸೂಚಿಸಲಾಗಿತ್ತು. ದೇವಾಸ್ ಪೊಲೀಸರು ಟೋಲ್ ಬೂತ್ ನ ಬಳಿ ಈ ಜೋಡಿ ಬಸ್ ನಲ್ಲಿರುವುದನ್ನು ಪತ್ತೆ ಮಾಡಿದ್ದೆವು ಎಂದು ಎಸ್ ಡಿಒಪಿ ಪ್ರಶಾಂತ್ ಸಿಂಗ್ ಭದೋರಿಯಾ ಹೇಳಿದ್ದಾರೆ.

ಬಸ್ ನಿಂದ ಇಳಿಸಿ ಅವರಿಬ್ಬರನ್ನೂ ಕರೆದೊಯ್ಯುತ್ತಿರುವಾಗ, ಬಸ್ ನ್ನು ಹಿಂಬಾಲಿಸಿಕೊಂಡು ಬಂದಿದ್ದ ಎರಡು ಕಾರ್ ನಿಂದ ಇಳಿದ ವ್ಯಕ್ತಿಗಳು ಯುವಕನ ಮೇಲೆ ಏಕಾ ಏಕಿ ಹಲ್ಲೆಗೆ ಮುಂದಾದರು.

ಪೊಲೀಸರು ತಡೆಯಲು ಯತ್ನಿಸಿದರೂ ಯುವಕನನ್ನು ತೀವ್ರವಾಗಿ ಥಳಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಗುಂಪು ಯುವಕನನ್ನು ಮುಸ್ಲಿಂ ಯುವಕನೆಂದೂ, ಹಿಂದೂ ಯುವತಿಯ ಜೊತೆಗೆ ಪರಾರಿಯಾಗಿ ಲವ್ ಜಿಹಾದ್ ನಡೆಸುತ್ತಿದ್ದಾನೆ ಎಂದುಕೊಂಡಿತ್ತು. ಆದರೆ ಆ ಇಬ್ಬರೂ ಹಿಂದೂಗಳಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಥಳಿಸುತ್ತಿದ್ದ ಗುಂಪಿಗೆ "ಈ ಇಬ್ಬರೂ ಹಿಂದೂಗಳೇ, ಇದು ಲವ್ ಜಿಹಾದ್ ಅಲ್ಲ, ಎಂದು ಎಷ್ಟೇ ಹೇಳಿದರೂ ಕೇಳದೇ ಥಳಿಸುತ್ತಿದ್ದರು. ಪೊಲೀಸರು ಇಲ್ಲದೇ ಇದ್ದಿದ್ದರೆ ಆ ಯುವಕ ಬದುಕಿ ಉಳಿಯುತ್ತಿರಲಿಲ್ಲ ಎಂದು ಗುಂಪಿನಲ್ಲಿದ್ದ ವ್ಯಕ್ತಿಗಳು ಹೇಳುತ್ತಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಯುವಕ-ಯುವತಿಯರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದು ಉತ್ತರ ಪ್ರದೇಶ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಯುವಕನಿಗೆ ಥಳಿಸಿದ್ದ ನಾಲ್ವರು ಮಂದಿಯ ವಿರುದ್ಧ ಹಾಗೂ ಇತಾರ 15 ಮಂದಿಯ ವಿರುದ್ಧ 353 ಸೆಕ್ಷನ್ (ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ಬಲ ಪ್ರಯೋಗ ಮಾಡಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಆರೋಪ) 147 (ದಂಗೆ) 323, 294 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com