ಮುಖ್ಯಮಂತ್ರಿಗಳಿಗೆ ತಾವು ಎಷ್ಟು ದಿನ ಅಧಿಕಾರದಲ್ಲಿರ್ತೀವಿ ಅನ್ನೋದು ಗೊತ್ತಿಲ್ಲ: ಗಡ್ಕರಿ
ಸಚಿವರ ನೇಮಕಾತಿಯ ಬಗ್ಗೆ ಉಲ್ಲೇಖಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಹುದ್ದೆಗಳ ಬಗ್ಗೆ ಯಾರಿಗೂ ಸಂತೋಷವಿಲ್ಲ, ಇನ್ನೂ ಹೆಚ್ಚಿನದ್ದು ಬೇಕೆಂಬ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ.
Published: 14th September 2021 05:35 PM | Last Updated: 14th September 2021 06:55 PM | A+A A-

ನಿತಿನ್ ಗಡ್ಕರಿ
ಜೈಪುರ: ಸಚಿವರ ನೇಮಕಾತಿಯ ಬಗ್ಗೆ ಉಲ್ಲೇಖಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಹುದ್ದೆಗಳ ಬಗ್ಗೆ ಯಾರಿಗೂ ಸಂತೋಷವಿಲ್ಲ, ಇನ್ನೂ ಹೆಚ್ಚಿನದ್ದು ಬೇಕೆಂಬ ಅಭಿಪ್ರಾಯವಿದೆ. ರಾಜಕೀಯ ಸಾಮಾಜಿಕ ಆರ್ಥಿಕ ಬದಲಾವಣೆ ತರುವುದಕ್ಕೆ ಇರುವ ಸಾಧನ ಎಂದು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಸಂಸದೀಯ ವ್ಯವಸ್ಥೆ ಹಾಗೂ ಜನರ ನಿರೀಕ್ಷೆಗಳು ಎಂಬ ವಿಷಯದ ಬಗ್ಗೆ ಸೆಮಿನಾರ್ ಉದ್ದೇಶಿಸಿ ಮಾತನಾಡಿರುವ ಗಡ್ಕರಿ, ಶಾಸಕರಿಗೆ ಮಂತ್ರಿಯಾಗಲಿಲ್ಲ ಎಂಬ ಬೇಸರವಿದೆ. ಸಚಿವರಿಗೆ ತಮಗೆ ಒಳ್ಳೆಯ ಇಲಾಖೆ ಸಿಗಲಿಲ್ಲ ಎಂಬ ಬೇಸರವಿದೆ. ಇನ್ನೂ ಕೆಲವರಿಗೆ ಸಿಎಂ ಆಗಲಿಲ್ಲ ಎಂಬ ಬೇಸರವಿದೆ. ಇನ್ನು ಮುಖ್ಯಮಂತ್ರಿಯಾದವರಿಗೆ ಎಷ್ಟು ದಿನ ಆ ಹುದ್ದೆಯಲ್ಲಿರುತ್ತೇವೆ ಎಂಬುದು ತಿಳಿಯದೇ ಬೇಸರದಲ್ಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಸರಿ ಇಲ್ಲದವರನ್ನು ದೆಹಲಿಗೆ ಕಳಿಸಲಾಗುತ್ತಿತ್ತು. ದೆಹಲಿಯಲ್ಲೂ ಸಲ್ಲದವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುತ್ತಿತ್ತು. ರಾಜ್ಯಪಾಲರಾಗುವುದಕ್ಕೂ ಸರಿ ಇಲ್ಲದವರನ್ನು ರಾಯಭಾರಿಗಳನ್ನಾಗಿ ಮಾಡಲಾಗುತ್ತಿತ್ತು ಎಂದು ಕವಿ ಶರದ್ ಜೋಶಿ ಒಮ್ಮೆ ಬರೆದಿದ್ದರು. ಇದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ನಾನು ಬಿಜೆಪಿ ರಾಷ್ಟ್ರಾಧ್ಯಕ್ಷನಾಗಿದ್ದಾಗ ಬೇಸರವಿಲ್ಲದ ಒಬ್ಬನನ್ನೂ ನೋಡಿಲ್ಲ. ಸಂತೋಷವಾಗಿ ಹೇಗಿರುವುದು ಎಂದು ಪತ್ರಕರ್ತರೊಬ್ಬರು ಕೇಳಿದ್ದರು. ಭವಿಷ್ಯದಲ್ಲಿ ಏನಾಗಲಿದೆಯೋ ಎಂಬ ಬಗ್ಗೆ ಅತಿ ಹೆಚ್ಚು ಚಿಂತೆ ಮಾಡದೇ ಇರುವುದರಿಂದ ಸಂತೋಷವಾಗಿರಬಹುದು ಎಂದು ಹೇಳಿದ್ದಾಗಿ ಗಡ್ಕರಿ ಹಳೆಯ ನೆನಪುಗಳನ್ನು ಸ್ಮರಿಸಿದ್ದಾರೆ.
ಹಲವು ಸಮಸ್ಯೆಗಳಿದ್ದರೂ ಶಾಸಕಾಂಗದ ಕರ್ತವ್ಯ ಸಾಮಾಜಿಕ, ಆರ್ಥಿಕ ಉನ್ನತೀಕರಣಕ್ಕಾಗಿ ಗುಣಾತ್ಮಕ ಬದಲಾವಣೆ ತರುವುದಾಗಿದೆ ಎಂದು ಗಡ್ಕರಿ ಶಾಸಕರಿಗೆ ಸಲಹೆ ನೀಡಿದ್ದಾರೆ.