ಪಂಜಾಬ್‌ನಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ? ರಾಜೀನಾಮೆ ನೀಡುವಂತೆ ಸಿಎಂ ಅಮರಿಂದರ್ ಸಿಂಗ್ ಗೆ ಸೂಚನೆ
ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ನಾಯಕತ್ವ ಬದಲಾಯಿಸುವಂತೆ 40 ಕಾಂಗ್ರೆಸ್ ಶಾಸಕರು ಒತ್ತಾಯಿಸಿದ ನಂತರ...
Published: 18th September 2021 03:39 PM | Last Updated: 18th September 2021 03:39 PM | A+A A-

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್
ನವದೆಹಲಿ: ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ನಾಯಕತ್ವ ಬದಲಾಯಿಸುವಂತೆ 40 ಕಾಂಗ್ರೆಸ್ ಶಾಸಕರು ಒತ್ತಾಯಿಸಿದ ನಂತರ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದೆ.
ಇಂದು ಸಂಜೆ ಪಕ್ಷದ ಶಾಸಕರ ಸಭೆಯ ನಂತರ ಹೊಸ ನಾಯಕನನ್ನು ನಿರ್ಧರಿಸುವ ನಿರೀಕ್ಷೆಯಿದೆ.
ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ ಮತ್ತು ಪಂಜಾಬ್ ನ 40 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನಿಲ್ ಜಖರ್, ಲುಧಿಯಾನಾ ಸಂಸದ ರವನೀತ್ ಸಿಂಗ್ ಬಿಟ್ಟು ಮತ್ತು ರಾಜ್ಯಸಭಾ ಸಂಸದ ಪರ್ತಪ್ ಸಿಂಗ್ ಬಾಜ್ವಾ ಅವರು ನೂತನ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಆದರೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ರೇಸ್ ನಿಂದ ಹೊರಗುಳಿದಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನು ಓದಿ: ಅಮರಿಂದರ್ ಸಿಂಗ್ ವಿರುದ್ಧ ಪಂಜಾಬ್ ನ ಹಲವು ಶಾಸಕರು, ಸಚಿವರ ಬಂಡಾಯ
"ಅಮರೀಂದರ್ ಸಿಂಗ್ ಅವರು ಪಕ್ಷದ ಶಾಸಕರ ವಿಶ್ವಾಸ ಕಳೆದುಕೊಂಡಿರುವುದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಲಾಗಿದೆ. ಪಕ್ಷದ ಶಾಸಕರ ಸಭೆಗೆ ಮುನ್ನ ಅವರು ತಮ್ಮ ಬಣದ ಶಾಸಕರನ್ನು ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ 2 ಗಂಟೆಗೆ ತಮ್ಮ ಬಣದ ಶಾಸಕರ ಸಭೆ ಕರೆದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ನಿನ್ನೆ ತಡರಾತ್ರಿ, ಪಂಜಾಬ್ ಎಐಸಿಸಿ ಉಸ್ತುವಾರಿ ಹರೀಶ್ ರಾವತ್ ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಒಂದೇ ಬಾರಿಗೆ ಎಲ್ಲಾ ಸಮಸ್ಯೆ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಅವರೊಂದಿಗೆ ತಾವು ಪಂಜಾಬ್‌ಗೆ ಭೇಟಿ ನೀಡುತ್ತಿರುವುದಾಗಿ ಹೇಳಿದ್ದರು.