ಪಾಟ್ನಾ: ಬಿಹಾರದ ಹಲವು ಜಿಲ್ಲೆಗಳಲ್ಲಿ ರೈಲ್ವೆ ಸೇತುವೆಗಳು ಮತ್ತು ಹಳಿಗಳನ್ನು ಗುರಿಯಾಗಿಸಿಕೊಂಡು ಐಎಸ್ಐ ಪ್ರೇರಿತ ಭಯೋತ್ಪಾದಕರ ಗುಂಪು ದಾಳಿ ಮಾಡುವ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಬಂಧನಕ್ಕೊಳಗಾಗಿರುವ ಎರಡು ಶಂಕಿತ ಐಎಸ್ ಐ ಏಜೆಂಟ್ ಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಬಂಧನಕ್ಕೀಡಾಗಿರುವ ಎರಡು ಐಎಸ್ಐ ಶಂಕಿತ ಉಗ್ರರಿಂದ ಜಾಗೃತ ದಳ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಈ ಮಧ್ಯೆ ಬಿಹಾರದ ಪೂರ್ವ ಕೇಂದ್ರ ರೈಲ್ವೆಯ ಸಮಸ್ತಿಪುರ ವಿಭಾಗದ ರೈಲ್ವೆ ರಕ್ಷಣಾ ಪಡೆ(ಆರ್ ಪಿಎಫ್) ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ 13 ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಿದೆ.
ಬಿಹಾರದ 13 ಜಿಲ್ಲೆಗಳಲ್ಲಿ ರೈಲ್ವೆ ಪೊಲೀಸರಿಗೆ ಬರೆದಿರುವ ಅಧಿಕೃತ ಪತ್ರದಲ್ಲಿ ವಿಭಾಗೀಯ ರಕ್ಷಣಾ ಆಯುಕ್ತರು ಸಾಧ್ಯವಾದಷ್ಟು ಕಣ್ಗಾವಲು ಮತ್ತು ಜಾಗ್ರತೆಯನ್ನು ಕಾಪಾಡುವಂತೆ ಹೇಳಿದ್ದಾರೆ.
ಸಮಸ್ತಿಪುರ, ದರ್ಭಾಂಗ, ಸೀತಾಮರ್ಹಿ, ಸುಪಾಲ್, ಮೋತಿಹಾರಿ, ಬೆಟ್ಟಿಯಾ, ಮುಜಫರ್ ಪುರ್, ಖಗಾರಿಯಾ,ಮಧುಬನಿ, ಬೇಗುಸರೈ, ಸಹರ್ಸಾ, ಮಾದೇಪುರ ಮತ್ತು ಪೂರ್ಣಿಯಾ ಜಿಲ್ಲೆಗಳಲ್ಲಿ ರೈಲು ಸೇತುವೆಗಳು ಮತ್ತು ಹಳಿಗಳ ಮೇಲೆ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಆರ್‌ಪಿಎಫ್ ಮತ್ತು ಜಿಆರ್‌ಪಿ ಸೇರಿದಂತೆ ರೈಲ್ವೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ಪತ್ರದ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ಅದರಲ್ಲಿ ಸಂಬಂಧಿತ ಭದ್ರತಾ ಏಜೆನ್ಸಿಗಳನ್ನು ವಿಶೇಷ ನಿಗಾದಲ್ಲಿ ಎಲ್ಲಾ ಮುನ್ನೆಚ್ಚರಿಕೆ ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಲಾಗಿದೆ.
ಮೂರು ಬಿಹಾರ ಜಿಲ್ಲೆಗಳು ಸೇರಿದಂತೆ ದೇಶದ ವಿವಿಧೆಡೆ ಸೇತುವೆಗಳು, ಮೋರಿಗಳು, ರೈಲ್ವೆ ಹಳಿಗಳು, ಜನನಿಬಿಡ ಸ್ಥಳಗಳಲ್ಲಿ ಆರ್‌ಡಿಎಕ್ಸ್ ಸ್ಫೋಟಗಳನ್ನು ನಡೆಸುವ ಉದ್ದೇಶವಿದೆ ಎಂದು ದೆಹಲಿ ಪೊಲೀಸರು ಬಂಧಿಸಿರುವ ಆರೋಪಿಗಳಿಂದ ತಿಳಿದುಬಂದಿದೆ.
ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ದುರ್ಗಾ ಪೂಜೆ ಮತ್ತು ಛತ್ ಹಬ್ಬದ ಸಂದರ್ಭದಲ್ಲಿ, ಬಿಹಾರದಲ್ಲಿ ರೈಲು ಪ್ರಯಾಣ ಹೆಚ್ಚಾಗುತ್ತದೆ. ರೈಲ್ವೆ ಸೇತುವೆಗಳು ಮತ್ತು ಮೋರಿಗಳು ಮತ್ತು ಹಳಿಗಳ ಹಲವು ಪ್ರದೇಶಗಳ ಭದ್ರತೆಯು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ. ಆದ್ದರಿಂದ, ವರದಿಯ ಆಧಾರದ ಮೇಲೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರಿ ರೈಲ್ವೆ ಪೊಲೀಸ್ ಅಧೀಕ್ಷಕರಿಗೆ (ಜಿಆರ್‌ಪಿ) ಪತ್ರ ಬರೆಯಲಾಗಿದೆ.
Advertisement