10 ವರ್ಷಗಳ ಹೋರಾಟಕ್ಕೂ ಸಿದ್ಧ ಆದರೆ ಹೊಸ ಕೃಷಿ ಕಾನೂನು ಜಾರಿಗೆ ಬಿಡುವುದಿಲ್ಲ: ಭಾರತ್ ಬಂದ್ ಗೂ ಮುನ್ನ ರಾಕೇಶ್ ಟಿಕಾಯತ್
ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ನ ನಾಯಕ ರಾಕೇಶ್ ಟಿಕಾಯತ್ ಭಾರತ್ ಬಂದ್ ಬಗ್ಗೆ ಮಾತನಾಡಿದ್ದಾರೆ.
Published: 26th September 2021 11:05 PM | Last Updated: 26th September 2021 11:05 PM | A+A A-

ರಾಕೇಶ್ ಟಿಕಾಯತ್
ಚಂಡೀಗಢ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ನ ನಾಯಕ ರಾಕೇಶ್ ಟಿಕಾಯತ್ ಭಾರತ್ ಬಂದ್ ಬಗ್ಗೆ ಮಾತನಾಡಿದ್ದು ಇನ್ನೂ 10 ವರ್ಷಗಳ ಹೋರಾಟಕ್ಕೂ ಸಿದ್ಧರಿದ್ದೇವೆ ಆದರೆ ಹೊಸ ಕೃಷಿ ಕಾನೂನು ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ರೈತರು, ಪ್ರಮುಖವಾಗಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಕೃಷಿಕರು ಕೇಂದ್ರ ಸರ್ಕಾರ ಜಾರಿ ತರಲು ಉದ್ದೇಶಿಸಲಾಗಿರುವ ಕೃಷಿ ಕಾನೂನನ್ನು ವಿರೋಧಿಸಿ ಅದನ್ನು ವಾಪಸ್ ಪಡೆಯುವಂತೆ ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೃಷಿ ಕಾನೂನನ್ನು ವಿರೋಧಿಸಿ 10 ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ನಾವು 10 ವರ್ಷಗಳ ಕಾಲ ಹೋರಾಟಕ್ಕೂ ಸಿದ್ಧರಿದ್ದೇವೆ ಎಂಬ ಸಂದೇಶವನ್ನು ಸರ್ಕಾರ ಕಿವಿ ತೆರೆದು ಆಲಿಸಬೇಕು ಎಂದು ಪಾಣಿಪತ್ ನಲ್ಲಿ ಟಿಕಾಯತ್ ಕಿಸಾನ್ ಮಹಾಪಂಚಾಯತ್ ನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದ್ದಾರೆ.
ಭಾರತ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕಿದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದು, ರೈತರು ತಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವ ಸಂದೇಶವನ್ನು ರವಾನೆ ಮಾಡಿದ್ದಾರೆ.
" ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನು ಸಿದ್ಧವಾಗಿರಿಸಿಕೊಂಡಿರಬೇಕು ದೆಹಲಿಯೆಡೆಗೆ ತೆರಳಲು ಯಾವುದೇ ಕ್ಷಣದಲ್ಲಿ ಅದು ಬೇಕಾಗುತ್ತದೆ ಎಂದು" ಟಿಕಾಯತ್ ರೈತರಿಗೆ ಕರೆ ನೀಡಿದ್ದಾರೆ. ಸೆ.27 ರಂದು ಭಾರತ್ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿದ್ದು ಇದಕ್ಕೂ ಮುನ್ನ ರಾಕೇಶ್ ಟಿಕಾಯತ್ ಮಹಾಪಂಚಾಯತ್ ನ್ನುದ್ದೇಶಿಸಿ ಮಾತನಾಡಿದ್ದಾರೆ.