ಮುಂಬೈ: ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ 5 ದಿನಗಳ ಬಳಿಕ ಖಾತೆ ಹಂಚಿಕೆ ಮಾಡಲಾಗಿದೆ.
18 ಸಚಿವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದ ಏಕನಾಥ್ ಶಿಂಧೆ ನಗರಾಭಿವೃದ್ಧಿ ಹಾಗೂ 11 ಇತರ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಪ್ರಮುಖ ಖಾತೆಗಳಾದ ಗೃಹ ಹಾಗೂ ವಿತ್ತ ಖಾತೆಗಳನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ವಹಿಸಿದ್ದಾರೆ.
ಇದಷ್ಟೇ ಅಲ್ಲದೇ ಫಡ್ನವೀಸ್ ಹಣಕಾಸು ಹಾಗೂ ಯೋಜನಾ ಖಾತೆಗಳನ್ನು ಪಡೆದಿದ್ದಾರೆ ಎಂದು ಸಿಎಂಒ ಮಾಹಿತಿ ನೀಡಿದೆ.
ಮತ್ತೊಂದು ಪ್ರಮುಖ ಖಾತೆಯಾದ ಕಂದಾಯ ಖಾತೆಯೂ ಬಿಜೆಪಿಯ ಪಾಲಾಗಿದ್ದು, ಬಿಜೆಪಿ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಕಂದಾಯ ಸಚಿವರಾಗಿದ್ದಾರೆ. ಪಾಟೀಲ್ 2019 ರ ವಿಧಾನಸಭಾ ಚುನಾವಣೆಗೂ ಕೆಲವೇ ತಿಂಗಳುಗಳ ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದರು.
ಸರ್ಕಾರ ರಚನೆಯಾದ 41 ದಿನಗಳ ಬಳಿಕ ಆ.09 ರಂದು ಸಿಎಂ ಶಿಂಧೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದರು.
Advertisement