ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನೀವು ಉನ್ನತ ಮಟ್ಟದ ನಾಯಕರಿಗೆ ಸವಾಲಾದರೆ, ನಿಮ್ಮನ್ನು ಬಿಜೆಪಿ ಕುಗ್ಗಿಸುತ್ತದೆ; ಗಡ್ಕರಿಗೆ ಖೋಕ್ ಬಗ್ಗೆ ಎನ್ ಸಿಪಿ ಟಾಂಗ್

ಬಿಜೆಪಿ ಸಂಸದೀಯ ಮಂಡಳಿಯ ಪುನಾರಚನೆಯಲ್ಲಿ ನಿತಿನ್ ಗಡ್ಕರಿಗೆ ಖೋಕ್ ನೀಡಿರುವ ಬಗ್ಗೆ ಎನ್ ಸಿಪಿ ಪ್ರತಿಕ್ರಿಯೆ ನೀಡಿದೆ.

ಮುಂಬೈ: ಬಿಜೆಪಿ ಸಂಸದೀಯ ಮಂಡಳಿಯ ಪುನಾರಚನೆಯಲ್ಲಿ ನಿತಿನ್ ಗಡ್ಕರಿಗೆ ಖೋಕ್ ನೀಡಿರುವ ಬಗ್ಗೆ ಎನ್ ಸಿಪಿ ಪ್ರತಿಕ್ರಿಯೆ ನೀಡಿದ್ದು,  ಗಡ್ಕರಿ ಅವರು ಚಾಣಾಕ್ಷ ರಾಜಕಾರಣಿಯಾಗಿ ಬೆಳವಣಿಗೆಯಾಗುತ್ತಿರುವುದರಿಂದ ಅವರನ್ನು ಕುಗ್ಗಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿದೆ. 

"ನಿಮ್ಮ ಸಾಮರ್ಥ್ಯ ಹಾಗೂ ಗುಣಮಟ್ಟ ಹೆಚ್ಚಿ, ಉನ್ನತ ಮಟ್ಟದ ನಾಯಕರಿಗೆ ಸವಾಲಾದರೆ, ಬಿಜೆಪಿ ನಿಮ್ಮನ್ನು ಕುಗ್ಗಿಸುತ್ತದೆ. ಕಳಂಕಿತರು ಮೇಲೇರುತ್ತಾರೆ ಎಂದು ಎನ್ ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಟ್ವಿಟರ್ ನಲ್ಲಿ ಹೇಳಿದ್ದಾರೆ.

ನಿಷ್ಠುರವಾಗಿ ಮಾತನಾಡುವ ಗಡ್ಕರಿ ರಾಜಕೀಯ ವಲಯದಲ್ಲಿ ಪಕ್ಷಾತೀತವಾಗಿ ಉತ್ತಮ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ನಿತಿನ್ ಗಡ್ಕರಿ ಅವರೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. 

ನಿತಿನ್ ಗಡ್ಕರಿ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯಿಂದ ಹೊರಗಿಡಲಾಗಿದ್ದು, ಇದು ಅವರು ಚಾಣಾಕ್ಷ, ಕುಶಾಗ್ರಮತಿ ರಾಜಕಾರಣಿಯಾಗಿ ಮೇಲೇರುತ್ತಿರುವುದನ್ನು ತೋರಿಸುತ್ತದೆ ಎಂದು ಟ್ವಿಟರ್ ನಲ್ಲಿ ಕ್ರಾಸ್ಟೊ ಬರೆದಿದ್ದಾರೆ.

ಈ ಇಬ್ಬರೂ ರಾಜಕಾರಣಿಗಳನ್ನು ಸಂಸದೀಯ ಮಂಡಳಿಯಿಂದ ಕೈಬಿಟ್ಟಿರುವುದನ್ನು ಅವರ ರಾಜಕೀಯ ಬೆಳವಣಿಗೆಯನ್ನು ಕುಗ್ಗಿಸಲು ಕೈಗೊಂಡಿರುವ ನಿರ್ಣಯ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗಡ್ಕರಿ ಅವರೊಂದಿಗೆ ಅಷ್ಟೇನೂ ಉತ್ತಮ ಸಂಬಂಧ ಹೊಂದಿರದ, ದೇವೇಂದ್ರ ಫಡ್ನವೀಸ್ ಅವರನ್ನು ಕೇಂದ್ರ ಚುನಾವಣಾ ಸಮಿತಿಗೆ ಆಯ್ಕೆ ಮಾಡಲಾಗಿದೆ.

ರಾಜಕೀಯದಿಂದಲೂ ಹೊರತಾದ ಹೆಚ್ಚಿನ ಜೀವನವಿದ್ದು, ಕೆಲವೊಮ್ಮೆ ರಾಜಕೀಯವನ್ನು ಬಿಟ್ಟುಬಿಡಬೇಕೆಂದೆನಿಸುತ್ತದೆ ಎಂದು ಕಳೆದ ತಿಂಗಳಷ್ಟೇ ಗಡ್ಕರಿ ಹೇಳಿದ್ದರು. ರಾಜಕಾರಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಬದಲಾವಣೆಗಿಂತಲೂ ಹೆಚ್ಚಾಗಿ ಅಧಿಕಾರದಲ್ಲಿರುವುದಕ್ಕಾಗಿಯೇ ಮಾಡಲಾಗುತ್ತಿದೆ ಎಂದು ಗಡ್ಕರಿ ಬೇಸರ ವ್ಯಕ್ತಪಡಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com