

ನವದೆಹಲಿ: ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದ ಹಲವು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತಿ ಶಿವಸೇನೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.
ಸಾಂವಿಧಾನಿಕ ಪೀಠ ಗುರುವಾರ ಈ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಶಿವಸೇನೆ ಚಿಹ್ನೆ ಸೇರಿದಂತೆ ಶಿಂಧೆ ಬಣದ ಮನವಿಯ ಆಧಾರದ ಮೇಲೆ ಯಾವುದೇ ಆದೇಶಗಳನ್ನು ನೀಡದಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಅನರ್ಹತೆ, ಸ್ಪೀಕರ್ ಮತ್ತು ರಾಜ್ಯಪಾಲರ ಅಧಿಕಾರ ಮತ್ತು ನ್ಯಾಯಾಂಗ ಪರಿಶೀಲನೆಗೆ ಸಂಬಂಧಿಸಿದ ಸಂವಿಧಾನದ 10ನೇ ಶೆಡ್ಯೂಲ್‌ಗೆ ಸಂಬಂಧಿಸಿದ ಪ್ರಮುಖ ಸಾಂವಿಧಾನಿಕ ಸಮಸ್ಯೆಗಳನ್ನುಈ ಅರ್ಜಿಯಲ್ಲಿ ಎತ್ತಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಹೇಳಿದೆ.
ಉದ್ಧವ್ ಠಾಕ್ರೆ ಅವರ ಬಣದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸುವಂತೆ ಮತ್ತು ಯಾರ ಬಣ ನಿಜವಾದ ಶಿವಸೇನೆ ಎಂಬುದನ್ನು ಚುನಾವಣಾ ಆಯೋಗವು ನಿರ್ಧರಿಸಲಿ ಎಂದು ಶಿಂಧೆ ಬಣ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು.
Advertisement