ಗುಲಾಂ ನಬಿ ಆಜಾದ್ ರಾಜೀನಾಮೆ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ; ಕಾಂಗ್ರೆಸ್ ತನ್ನ ಪಕ್ಷ ಜೋಡಿಸುವ ಕೆಲಸ ಮೊದಲು ಮಾಡಲಿ: ಬಿಜೆಪಿ ವ್ಯಂಗ್ಯ

ಗುಲಾಂ ನಬಿ ಆಜಾದ್ ಅವರ ರಾಜೀನಾಮೆಗೆ ಬಿಜೆಪಿ ವ್ಯಂಗ್ಯವಾಡಿ ಟ್ವೀಟ್ ಮಾಡಿದೆ. ಈ ಸಂದರ್ಭದಲ್ಲಿ ದೇಶ ಜೋಡಿಸುವ ಕೆಲಸವನ್ನು ನಾವು ಮಾಡುತ್ತೇವೆ, ನೀವು ನಿಮ್ಮ ಪಕ್ಷವನ್ನು ಜೋಡಿಸುವ ಕೆಲಸ ಮೊದಲು ಮಾಡಿ, ನಿಮ್ಮ ಪಕ್ಷವನ್ನು ಸರಿಪಡಿಸಿಕೊಳ್ಳಿ ಎಂದು ವ್ಯಂಗ್ಯ ಮಾಡಿದೆ.
ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್(ಸಂಗ್ರಹ ಚಿತ್ರ)
ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್(ಸಂಗ್ರಹ ಚಿತ್ರ)

ನವದೆಹಲಿ: ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿ ಪಕ್ಷದೊಂದಿಗೆ ಸಂಪೂರ್ಣವಾಗಿ ಸಂಬಂಧ ಕಡಿದುಕೊಂಡಿರುವ ಗುಲಾಂ ನಬಿ ಆಜಾದ್ ರವರ ನಡೆ ಪಕ್ಷಕ್ಕೆ ಆಘಾತವನ್ನುಂಟುಮಾಡಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂಬ ಹೊತ್ತಿನಲ್ಲಿ ಹಿರಿಯ ನಾಯಕರೊಬ್ಬರ ನಿರ್ಗಮನ ಪಕ್ಷಕ್ಕೆ ಹಿನ್ನಡೆಯಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್, ಗುಲಾಂ ನಬಿ ಆಜಾದ್ ಅವರಿಗೆ ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿಯವರಿಂದ ಗುಲಾಂ ನಬಿ ಆಜಾದ್ ದೇಶದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ನೀಡಿರುವ ಕಾರಣಗಳ ಬಗ್ಗೆ ಏನನ್ನಿಸುತ್ತದೆ ಎಂದು ಹೇಳಲು ನನಗೆ ಪದಗಳೇ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳನ್ನು ಗುಲಾಂ ನಬಿ ಆಜಾದ್ ನಿರ್ವಹಿಸಿದ್ದಾರೆ. ಹಾಗಿರುವಾಗ ಇಂತಹ ಪತ್ರ ಅವರು ಬರೆಯುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಹಿಂದೆ ಸೋನಿಯಾ ಗಾಂಧಿಯವರು ಅಮೆರಿಕಕ್ಕೆ ವೈದ್ಯಕೀಯ ತಪಾಸಣೆಗೆ ಹೋಗಿದ್ದಾಗ ಪತ್ರ ಬರೆದಿದ್ದರು ಎಂದು ಅಶೋಕ್ ಗೆಹ್ಲೊಟ್ ಬೇಸರದಿಂದ ನುಡಿದಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್, ಇಂತಹ ಮಹತ್ವದ ಕಾಲಘಟ್ಟದಲ್ಲಿ ಹಿರಿಯ ನಾಯಕರಾಗಿದ್ದ ಗುಲಾಂ ಅವರು ಪಕ್ಷ ತೊರೆಯಬಾರದಾಗಿತ್ತು. ಹೋರಾಡಲು ಅವರು ಸಿದ್ಧರಿಲ್ಲ ಎಂಬುದನ್ನು ಅವರ ನಡವಳಿಕೆ ತೋರಿಸುತ್ತದೆ. ರಾಹುಲ್ ಗಾಂಧಿಯವರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ. ಅವರಿಗೆ ಅಧಿಕಾರ ಬೇಕಾಗಿತ್ತು. ಪಕ್ಷ ತೊರೆದಿರುವುದರಿಂದ ನಷ್ಟ ಅವರಿಗೇ, ಕಾಂಗ್ರೆಸ್ ಗಲ್ಲ ಎಂದಿದ್ದಾರೆ.

ದುರದೃಷ್ಟಕರ: ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯನ್ನು "ದುರದೃಷ್ಟಕರ" ಎಂದು ಕರೆದಿರುವ ಕಾಂಗ್ರೆಸ್ ಈ ಸಮಯ ಭೀಕರವಾಗಿದೆ ಎಂದು ಹೇಳಿದೆ. ಪಕ್ಷವು ವಿವಿಧ ವಿಷಯಗಳಲ್ಲಿ ಬಿಜೆಪಿಯನ್ನು ಎದುರಿಸಲು ತೊಡಗಿರುವ ಸಮಯದಲ್ಲಿ ಕಾಂಗ್ರೆಸ್ ಗೆ ಇದು ಆಘಾತಕಾರಿ ಬೆಳವಣಿಗೆಯಾಗಿದೆ. 

ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರು, ಹಣದುಬ್ಬರ ಮತ್ತು ಧ್ರುವೀಕರಣದ ವಿರುದ್ಧ ಹೋರಾಡುತ್ತಿರುವ ಪಕ್ಷವನ್ನು ತ್ಯಜಿಸಲು ಅವರು ನಿರ್ಧರಿಸಿದ್ದು ದುಃಖಕರವಾಗಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಇಡೀ ಸಂಘಟನೆಯು ಬಿಜೆಪಿ ವಿರುದ್ಧ ಹೋರಾಟದಲ್ಲಿ ತೊಡಗಿರುವಾಗ ಇದು ಸಂಭವಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ ಎಂದು ಕಾಂಗ್ರೆಸ್ ಹೇಳಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಆಜಾದ್ ಬರೆದ ಪತ್ರದ ವಿಷಯಗಳನ್ನು ಪ್ರಶ್ನಿಸಿದ್ದಾರೆ. "ಪತ್ರದ ವಿಷಯಗಳು ವಾಸ್ತವಿಕವಾಗಿಲ್ಲ, ಸಮಯವು ಭೀಕರವಾಗಿದೆ" ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಜೋಡಿಸಿರಿ: ಗುಲಾಂ ನಬಿ ಆಜಾದ್ ಅವರ ರಾಜೀನಾಮೆಗೆ ಬಿಜೆಪಿ ವ್ಯಂಗ್ಯವಾಡಿ ಟ್ವೀಟ್ ಮಾಡಿದೆ. ಕಾಂಗ್ರಸ್ ಇನ್ನು ಕೆಲವೇ ದಿನಗಳಲ್ಲಿ ಭಾರತ್ ಜೋಡೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಹೊತ್ತಿನಲ್ಲಿ ಹಿರಿಯ ನಾಯಕರೊಬ್ಬರು ಹಲವು ದಶಕಗಳಿಂದ ಗುರುತಿಸಿಕೊಂಡಿದ್ದವರು ಪಕ್ಷ ತೊರೆದಿದ್ದಾರೆ. ಈ ಸಂದರ್ಭದಲ್ಲಿ ದೇಶ ಜೋಡಿಸುವ ಕೆಲಸವನ್ನು ನಾವು ಮಾಡುತ್ತೇವೆ, ನೀವು ನಿಮ್ಮ ಪಕ್ಷವನ್ನು ಜೋಡಿಸುವ ಕೆಲಸ ಮೊದಲು ಮಾಡಿ, ನಿಮ್ಮ ಪಕ್ಷವನ್ನು ಸರಿಪಡಿಸಿಕೊಳ್ಳಿ ಎಂದು ವ್ಯಂಗ್ಯ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com