
ನವದೆಹಲಿ: ದೆಹಲಿಯಲ್ಲಿ ಎಂಸಿಡಿ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮತದಾರರ ಹೆಸರೇ ನಾಪತ್ತೆಯಾಗಿದೆ ಎಂದು ಈಶಾನ್ಯ ದೆಹಲಿಯ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ.
ದೆಹಲಿ ಸರ್ಕಾರ ಉದ್ದೇಶಪೂರ್ವಕವಾಗಿ ಬಿಜೆಪಿ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪರವಿರುವ ಮತದಾರರ ಹೆಸರನ್ನು ಡಿಲೀಟ್ ಮಾಡಿದೆ.
ರಾಜ್ಯ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಲಿದ್ದೇನೆ ಹಾಗೂ ಮರು ಚುನಾವಣೆಗೆ ಆಗ್ರಹಿಸಲಿದ್ದೇನೆ ಎಂದು ಬಿಜೆಪಿ ಸಂಸದ ತಿವಾರಿ ಹೇಳಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ಶಾಸಕ ದಿಲೀಪ್ ಪಾಂಡೆ, ಬಿಜೆಪಿಗೆ ಚುನಾವಣೆಯಲ್ಲಿ ವಿಷಯಗಳಿಲ್ಲದೇ ಕುಸಿತ ಎದುರಾಗುತ್ತಿದೆ. ಆದ್ದರಿಂದ ಇಂಥದ್ದೊಂದು ರಾಜಕೀಯ ನಾಟಕಕ್ಕೆ ಮುಂದಾಗಿದೆ. ನಾನು ಮುಖರ್ಜಿ ನಗರದ ಮತದಾರನಾಗಿದ್ದು, ತಿಮರ್ಪುರ್ ನಲ್ಲಿ ಮತ ಹಾಕುತ್ತಿದ್ದೇನೆ, ತಾಂತ್ರಿಕ ದೋಷಗಳೇನೇ ಇದ್ದರೂ ಆಯೋಗ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದಾರೆ.
ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ಸಹ ಬಿಜೆಪಿಯ ಆರೋಪಕ್ಕೆ ದನಿಗೂಡಿಸಿದ್ದು, ಮತದಾರರ ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ. ನನ್ನ ಹೆಸರು ಮತದಾರರ ಪಟ್ಟಿಯಲ್ಲೂ ಇರಲಿಲ್ಲ, ಡಿಲೀಟ್ ಆದ ಪಟ್ಟಿಯಲ್ಲೂ ಇರಲಿಲ್ಲ ಎಂದು ಹೇಳಿದ್ದಾರೆ. ನನ್ನ ಮತವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕೃತವಾಗಿ ಹೇಳಿದರಾದರೂ ಅದು ಎಲ್ಲಿಗೆ ಎಂಬುದಕ್ಕೆ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ ಎಂದು ಚೌಧರಿ ಹೇಳಿದ್ದಾರೆ.
ಬೆಳಿಗ್ಗೆ 8 ಕ್ಕೆ ಮತದಾನ ಪ್ರಾರಂಭವಾಗಿದೆ. ದೆಹಲಿಯಾದ್ಯಂತ 13,638 ಮತಗಟ್ಟೆಗಳಿದ್ದು, 1.45 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
Advertisement