ದೇಶವ್ಯಾಪಿ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ: ಕರ್ನಾಟಕ ಸೇರಿ ಹಲವು ರಾಜ್ಯಗಳ 14,000 ಸಂತ್ರಸ್ತೆಯರ ರಕ್ಷಣೆ!
ಹೈದರಾಬಾದ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಘಟಿತವಾದ ಬೃಹತ್ ಜಾಲವೊಂದನ್ನು ಸೈಬರಾಬಾದ್ ಪೊಲೀಸರು ಭೇದಿಸಿದ್ದಾರೆ.
ಬೆಂಗಳೂರು, ದೆಹಲಿ, ಹೈದರಾಬಾದ್ ಮುಂತಾದ ಕಡೆ ಈ ಲೈಂಗಿಕ ಕಾರ್ಯಕರ್ತರ ಮಾಫಿಯಾ ಕಾರ್ಯಾಚರಿಸುತ್ತಿದೆ. ಈ ಜಾಲವನ್ನು ಭೇದಿಸಿರುವ ಪೊಲೀಸರು 14,000ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಈ ಮಾಫಿಯಾದಿಂದ ರಕ್ಷಿಸಿದ್ದಾರೆ. 17 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳು ಹಲವು ಪ್ರಮುಖ ನಗರಗಳಲ್ಲಿ ಕಾಲ್ ಸೆಂಟರ್‌ಗಳನ್ನು ನಿರ್ವಹಿಸುತ್ತಿದ್ದರು. ಇವರ ಪ್ರಮುಖ ಸಂಪರ್ಕ ಜಾಲ ವಾಟ್ಸ್ಯಾಪ್‌ನಲ್ಲಿತ್ತು. ವಿಲಾಸಿ ಲೈಫ್‌ಸ್ಟೈಲ್, ಐಷಾರಾಮಿ ಜೀವನ, ಸುಲಭ ಹಣದ ಆಸೆ ತೋರಿಸಿ ಸಾವಿರಾರು ಹೆಣ್ಣು ಮಕ್ಕಳನ್ನು ಈ ದಂಧೆಗೆ ಸೆಳೆಯಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.
ಈ ಜಾಲವು ಎಂಡಿಎಂಎ ಎನ್ನುವ ಮಾದಕವಸ್ತುವಿನ ಬಳಕೆ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಮಾನವಕಳ್ಳ ಸಾಗಣೆ ತಡೆ ಕಾಯ್ದೆ 1956ರ ಅನ್ವಯ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ವೆಬ್‌ಸೈಟ್‌ಗಳ ಮೂಲಕ ಜಾಹೀರಾತು ನೀಡುತ್ತಿದ್ದರು. ನಂತರ, ಕಾಲ್ ಸೆಂಟರ್‌ಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಲಾಗುತ್ತಿತ್ತು. ವ್ಯವಹಾರ ಕೂಡಿಬಂದರೆ, ಗಿರಾಕಿಗಳನ್ನು ಹಾಗೂ ಸಂತ್ರಸ್ತೆಯರನ್ನು ಜಾಲನಡೆಸುತ್ತಿದ್ದವರು ಹೋಟೆಲ್ ಕೊಠಡಿ ಗಳಿಗೆ ಕರೆದೊಯ್ಯುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಈ ಜಾಲದಲ್ಲಿ ಸಿಲುಕಿಕೊಂಡ ಶೇ 50ರಷ್ಟು ಸಂತ್ರಸ್ತೆಯರು ಪಶ್ಚಿಮ ಬಂಗಾಳದವರು. ಶೇ 20ರಷ್ಟು ಕರ್ನಾಟಕ, ಶೇ 15ರಷ್ಟು ಮಹಾರಾಷ್ಟ್ರ ಹಾಗೂ ಶೇ 7ರಷ್ಟು ದೆಹಲಿಯವರಾಗಿದ್ದಾರೆ. ಭಾರತದವರಲ್ಲದೆ, ಶೇ 3ರಷ್ಟು ಸಂತ್ರಸ್ತೆಯರು ಬಾಂಗ್ಲಾದೇಶ, ನೇಪಾಳ, ಥಾಯ್ಲೆಂಡ್, ಉಜ್ಬೆಕಿಸ್ತಾನ್, ರಷ್ಯಾಕ್ಕೆ ಸೇರಿದವರಾಗಿದ್ದಾರೆ’ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದರು.
ಸಂತ್ರಸ್ತೆಯರು ಹೋಟೆಲ್ ತಲುಪಿದ ಮೇಲೆ, ಜಾಲ ನಡೆಸುತ್ತಿದ್ದವರು ಎಲ್ಲಾ ವೆಬ್‌ಸೈಟ್, ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಸಂತ್ರಸ್ತೆಯರ ಫೋಟೊಗಳನ್ನು ಹಾಕುತ್ತಿದ್ದರು. ಜಾಹೀರಾತುಗಳನ್ನೂ ನೀಡಲಾಗುತ್ತಿತ್ತು. ಜಾಹೀರಾತು ನೋಡಿದ ಗಿರಾಕಿಗಳು ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸುತ್ತಿದ್ದರು. ನಂತರ, ಕಾಲ್ ಸೆಂಟರ್ ವ್ಯಕ್ತಿಯು ಈ ಗಿರಾಕಿಗಳಿಗೆ ಕರೆ ಮಾಡುತ್ತಿದ್ದರು ಮತ್ತು ಹೋಟೆಲ್‌ಗಳ ವಿಳಾಸವನ್ನು ನೀಡುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ