ಭಾರತ-ಚೀನಾ ಗಡಿಯಲ್ಲಿ ಸೈನಿಕರ ಘರ್ಷಣೆ: ಇಂದು ಮಧ್ಯಾಹ್ನ ಸಂಸತ್ತಿನ ಉಭಯ ಸದನಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ

ಸಂಸತ್ತು ಕಲಾಪದಲ್ಲಿ ಈಗ ಭಾರತ-ಚೀನಾ ಸಂಘರ್ಷದ ಬಗ್ಗೆ ಗದ್ದಲ, ಕೋಲಾಹಲ. ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆಯ (LAC) ಉದ್ದಕ್ಕೂ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಹತ್ತಿಕ್ಕಲು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. 
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಸಂಸತ್ತು ಕಲಾಪದಲ್ಲಿ ಈಗ ಭಾರತ-ಚೀನಾ ಸಂಘರ್ಷದ ಬಗ್ಗೆ ಗದ್ದಲ, ಕೋಲಾಹಲ. ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆಯ (LAC) ಉದ್ದಕ್ಕೂ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಹತ್ತಿಕ್ಕಲು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಧ್ಯಾಹ್ನ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ. ಪ್ರತಿಪಕ್ಷ ನಾಯಕರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇದುವರೆಗಿನ ಬೆಳವಣಿಗೆ: ಭಾರತ-ಚೀನಾ ಗಡಿಭಾಗದ ಪೂರ್ವ ಲಡಾಖ್‌ನಲ್ಲಿ ಎರಡು ಕಡೆಯ 30 ತಿಂಗಳ ಗಡಿ ಬಿಕ್ಕಟ್ಟಿನ ನಂತರ ಕಳೆದ ಶುಕ್ರವಾರ(ಡಿಸೆಂಬರ್ 9) ಸೂಕ್ಷ್ಮ ವಲಯದ ಗಡಿ ವಾಸ್ತವ ರೇಖೆ(LAC) ಉದ್ದಕ್ಕೂ ಯಾಂಗ್ಟ್ಸೆ ಬಳಿ ಘರ್ಷಣೆ ಸಂಭವಿಸಿದೆ. ಘರ್ಷಣೆಯಲ್ಲಿ ಭಾರತದ 6 ಮಂದಿ ಸೈನಿಕರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. 

ಈ ಸುದ್ದಿ ಬಂದ ಬೆನ್ನಲ್ಲೇ ಕಾಂಗ್ರೆಸ್ ನಿನ್ನೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ಈ ವಿಷಯವನ್ನು ಚರ್ಚಿಸುವ ಮೂಲಕ ಸರ್ಕಾರವು ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದೆ. ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆ ನಡೆಸುವಂತೆ ನೋಟಿಸ್ ಜಾರಿ ಮಾಡಿದೆ.

ರಕ್ಷಣಾ ಸಚಿವರ ಭಾಷಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಮತ್ತು 2 ಗಂಟೆಗೆ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಗೂ ಮುನ್ನ ಅವರು ಸೇನೆ ಮತ್ತು ರಾಜತಾಂತ್ರಿಕ ನಾಯಕತ್ವದೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲಿದ್ದಾರೆ. ಸಂಸತ್ತಿನಲ್ಲಿ ಕೇಂದ್ರದ ಪ್ರತಿಕ್ರಿಯೆಯನ್ನು ರೂಪಿಸಲು ರಕ್ಷಣಾ ಸಚಿವರು ಪ್ರಧಾನಿ ಮತ್ತು ಸಂಪುಟ ಸಹೋದ್ಯೋಗಿಗಳನ್ನು ಭೇಟಿಯಾಗಲಿದ್ದಾರೆ.

ಕಾಂಗ್ರೆಸ್ ಸಂಸದರಾದ ಮನೀಶ್ ತಿವಾರಿ ಮತ್ತು ಸೈಯದ್ ನಾಸಿರ್ ಹುಸೇನ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗಡಿ ಘರ್ಷಣೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ. ಎಎಪಿ ಸಂಸದ ರಾಘವ್ ಚಡ್ಡಾ ಮತ್ತು ಆರ್‌ಜೆಡಿಯ ಮನೋಜ್ ಝಾ ಕೂಡ ರಾಜ್ಯಸಭೆಯಲ್ಲಿ ಗಡಿ ಘರ್ಷಣೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ.

ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಕೇಂದ್ರವು ದೇಶವನ್ನು ಕತ್ತಲೆಯಲ್ಲಿಟ್ಟಿದೆ ಎಂದು ಆರೋಪಿಸಿದ ಅವರು, ಘರ್ಷಣೆಯ ಬಗ್ಗೆ ಸಂಸತ್ತಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಕೇಳಿದ್ದಾರೆ.

ಈ ವಿಚಾರವಾಗಿ ನಿನ್ನೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಹುಮುಖ ವಾಗ್ದಾಳಿ ನಡೆಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ನಾವು ಸರ್ಕಾರದೊಂದಿಗೆ ಒಂದಾಗಿದ್ದೇವೆ. ಅದನ್ನು ರಾಜಕೀಯಗೊಳಿಸಲು ಇಷ್ಟಪಡುವುದಿಲ್ಲ. 2020ರ ಏಪ್ರಿಲ್‌ನಿಂದ ಗಡಿವಾಸ್ತವ ರೇಖೆ ಬಳಿ ಎಲ್ಲಾ ಹಂತಗಳಲ್ಲಿ ಚೀನಾದ ಉಲ್ಲಂಘನೆ ಮತ್ತು ನಿರ್ಮಾಣದ ಬಗ್ಗೆ ಮೋದಿ ಸರ್ಕಾರ ಪ್ರಾಮಾಣಿಕವಾಗಿರಬೇಕು ಎಂದು ಹೇಳಿದ್ದಾರೆ.

2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮಗೊಂಡಿದ್ದರು. ಚೀನಾದ ಐದು ಸೇನಾಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಒಪ್ಪಿಕೊಂಡಿತ್ತು. ಆದರೆ ಚೀನಾದ ಕಡೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com