ಭಾರತ-ಚೀನಾ ಸಂಘರ್ಷ: ತುರ್ತು ಸಭೆ ಕರೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾಪಡೆ ಹಾಗೂ ರಕ್ಷಣಾ ಪಡೆ ಮುಖ್ಯಸ್ಥರು ಭಾಗಿ

ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಮೊನ್ನೆ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ಮಧ್ಯೆ ಏರ್ಪಟ್ಟ ಮುಖಾಮುಖಿ ಸಂಘರ್ಷದಲ್ಲಿ ಎರಡೂ ಕಡೆಯ ಹಲವು ಯೋಧರಿಗೆ ಗಾಯವಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸಂಸತ್ತು ಕಲಾಪದಲ್ಲಿ ಒತ್ತಾಯಿಸಿದೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಮೊನ್ನೆ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ಮಧ್ಯೆ ಏರ್ಪಟ್ಟ ಮುಖಾಮುಖಿ ಸಂಘರ್ಷದಲ್ಲಿ ಎರಡೂ ಕಡೆಯ ಹಲವು ಯೋಧರಿಗೆ ಗಾಯವಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸಂಸತ್ತು ಕಲಾಪದಲ್ಲಿ ಒತ್ತಾಯಿಸಿದೆ.

ಕಾಂಗ್ರೆಸ್ ನಾಯಕರು ಉಭಯ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಈ ಬೆಳವಣಿಗೆಗಳ ಕುರಿತು ಇಂದು ಸಂಸತ್ತು ಕಲಾಪದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ. ಅಲ್ಲದೆ ಮುಂದೆ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಲು ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರ ಜೊತೆ ಇಂದು ರಕ್ಷಣಾ ಸಚಿವರು ಸಭೆ ನಡೆಸಲಿದ್ದಾರೆ. ದೆಹಲಿಯ ತಮ್ಮ ನಿವಾಸದಲ್ಲಿ ಇಂದು ತುರ್ತು ಸಭೆ ಕರೆದಿದ್ದಾರೆ. 

ಭೂಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಮಾರ್ಷಲ್ ವಿಆರ್ ಚೌಧರಿ ಅವರ ಜೊತೆ ಇಂದು ರಾಜನಾಥ್ ಸಿಂಗ್ ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ. 

ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ), ವಿದೇಶಾಂಗ ಕಾರ್ಯದರ್ಶಿಗಳಾದ ವಿನಯ್ ಕ್ವಾತ್ರಾ ಮತ್ತು ಗಿರಿಧರ್ ಅರಮನೆ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಚೀನಾದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಇರುವ ಭದ್ರತಾ ಪರಿಸ್ಥಿತಿಯ ಕುರಿತು ವಿವರಿಸಲಿದ್ದಾರೆ. ತವಾಂಗ್‌ನಲ್ಲಿ ಎರಡೂ ಕಡೆಯ ಸೈನಿಕರ ನಡುವಿನ ಘರ್ಷಣೆಯ ಕುರಿತು ಭದ್ರತಾ ಪಡೆಗಳು ಅವರಿಗೆ ಮಾಹಿತಿ ನೀಡಿವೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com