ಆಳ್ವಾರ್(ರಾಜಸ್ತಾನ): ಗಡಿ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಿಂಹದಂತೆ ಮಾತನಾಡುತ್ತದೆ. ಆದರೆ ಚೀನಾ ಅತಿಕ್ರಮಣದ ವಿರುದ್ಧ ಯಾವುದೇ ಚಕಾರವೆತ್ತದೆ ಇಲಿಯಂತೆ ವರ್ತಿಸುತ್ತಿದೆ ಮತ್ತು ಸಂಸತ್ತಿನಲ್ಲಿ ಈ ವಿಷಯದ ಕುರಿತು ಚರ್ಚೆಯಿಂದ ಓಡಿಹೋಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ.
ರಾಜಸ್ಥಾನದ ಅಲ್ವಾರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ದೇಶಕ್ಕಾಗಿ ಕೆಲಸ ಮಾಡಿದೆ. ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದೆ. ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ದೇಶಕ್ಕಾಗಿ ಒಂದು "ನಾಯಿಯನ್ನು ಸಹ ಕಳೆದುಕೊಂಡಿಲ್ಲ" ಎಂದು ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರಿಗೆ ಭಾರತೀಯ ಸೈನಿಕರ ಬಗ್ಗೆ ಗೌರವವಿಲ್ಲ ಎಂದು ಮೋದಿ ಸರ್ಕಾರ ಹೇಳುತ್ತದೆ. ಆದರೆ ಅವರು ತಾವು ತುಂಬಾ ಬಲಿಷ್ಠರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ಇತ್ತ ಗಡಿಯಲ್ಲಿ ವಿವಾದಗಳು ಮತ್ತು ಘರ್ಷಣೆಗಳು ಹೆಚ್ಚುತ್ತಿವೆ ಎಂದು ಖರ್ಗೆ ಹೇಳಿದರು.
ದೇಶದ ಏಕತೆಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ನಮ್ಮ ಪಕ್ಷದ ನಾಯಕರು ಪ್ರಾಣ ಕೊಟ್ಟಿದ್ದಾರೆ, ನೀವೇನು ಮಾಡಿದ್ದೀರಿ? ನಿಮ್ಮ ಮನೆಯ ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯೇ? ಏನಾದರೂ ತ್ಯಾಗ ಮಾಡಿದ್ದಾರೆಯೇ? ಇಲ್ಲ. ಆದರೂ ನೀವು ದೇಶಭಕ್ತರು. ನಾವು ಏನಾದರೂ ನಿಮ್ಮ ವಿರುದ್ಧ ಮಾತನಾಡಿದರೆ ದೇಶದ್ರೋಹಿಗಳು ಎಂದು ತಿರುಗೇಟು ನೀಡಿದರು.
Advertisement