ಅಲಹಾಬಾದ್: ಉತ್ತರಪ್ರದೇಶದ ಅಲಹಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಪ್ರವೇಶಿಸುವ ವಿವಾದದ ನಂತರ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರ ಮೇಲೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದರು. ಇನ್ನು ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಈ ದಾಳಿಯಲ್ಲಿ ಎರಡೂ ಕಡೆಯ ಹಲವರು ಗಾಯಗೊಂಡಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪೊಲೀಸರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವಿದ್ಯಾರ್ಥಿ ಸಂಘದ ಕಚೇರಿ ಬಳಿ ವಿದ್ಯಾರ್ಥಿಗಳನ್ನು ಕೂರಿಸಲಾಗಿದೆ. ಅಲ್ಲದೆ ಎಲ್ಲಾ ದೂರುಗಳನ್ನು ಆಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ರಮಿತ್ ಶರ್ಮಾ ತಿಳಿಸಿದರು.
ಹಿಂಸಾಚಾರ ಮತ್ತು ಗಲಾಟೆಯ ದೃಷ್ಟಿಯಿಂದ ಅಲಹಾಬಾದ್ ವಿಶ್ವವಿದ್ಯಾಲಯವನ್ನು ಡಿಸೆಂಬರ್ 20ರಂದು ಒಂದು ದಿನದ ಮಟ್ಟಿಗೆ ಮುಚ್ಚಲಾಗುತ್ತದೆ.
ತಿಂಗಳಿನಿಂದ ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆಯ ಭಾಗವಾಗಿದ್ದ ವಿದ್ಯಾರ್ಥಿಯೊಬ್ಬರು ಕ್ಯಾಂಪಸ್‌ನಲ್ಲಿರುವ ಬ್ಯಾಂಕ್‌ಗೆ ಹೋಗಲು ಬಯಸಿದ್ದರು. ಆದರೆ ಸಿಬ್ಬಂದಿ ಅವರನ್ನು ಒಳಗೆ ಬಿಡಲಿಲ್ಲ. ಈ ವಿಚಾರವಾಗಿ ವಾಗ್ವಾದ ನಡೆದಿದ್ದು, ಹೊಡೆದಾಟದ ಜತೆಗೆ ಕಲ್ಲು ತೂರಾಟವೂ ನಡೆದಿದೆ.
ವಿದ್ಯಾರ್ಥಿ ಸಂಘದ ನಾಯಕ ಅಜಯ್ ಯಾದವ್ ಸಾಮ್ರಾಟ್ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದಾರೆ. ಕಳೆದ ತಿಂಗಳು ಸಹ, ಉಪಕುಲಪತಿ ಸಂಗೀತಾ ಶ್ರೀವಾಸ್ತವ ಅವರು ಕಚೇರಿಯಿಂದ ಹೊರಟು ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ ವಿದ್ಯಾರ್ಥಿಗಳು ಘೇರಾವ್ ಹಾಕಿದರು. ಶುಲ್ಕ ಹೆಚ್ಚಳವನ್ನು ಹಿಂಪಡೆಯುವುದಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಹೇಳಿದೆ.
Advertisement