'ಬಾರ್ಡರ್‌' ಸಿನಿಮಾಗೆ ಸ್ಫೂರ್ತಿಯಾಗಿದ್ದ 1971ರ ಇಂಡೋ-ಪಾಕ್‌ ಯುದ್ಧದ ವೀರ ರಾಥೋಡ್‌ ನಿಧನ: ನಟ ಸುನೀಲ್ ಶೆಟ್ಟಿ ಸಂತಾಪ

1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ರಾಜಸ್ಥಾನದ ಲೋಂಗೇವಾಲಾದಲ್ಲಿ ಶೌರ್ಯ ತೋರಿಸಿದ್ದ ಬಿಎಸ್‌ಎಫ್‌ ನಿವೃತ್ತ ಯೋಧ ಭೈರೋನ್‌ ಸಿಂಗ್‌ ರಾಥೋಡ್‌  ಸೋಮವಾರ ಜೋಧಪುರದಲ್ಲಿ ನಿಧನರಾದರು
ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ

1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ರಾಜಸ್ಥಾನದ ಲೋಂಗೇವಾಲಾದಲ್ಲಿ ಶೌರ್ಯ ತೋರಿಸಿದ್ದ ಬಿಎಸ್‌ಎಫ್‌ ನಿವೃತ್ತ ಯೋಧ ಭೈರೋನ್‌ ಸಿಂಗ್‌ ರಾಥೋಡ್‌  ಸೋಮವಾರ ಜೋಧಪುರದಲ್ಲಿ ನಿಧನರಾದರು. ಇವರು ಸೂಪರ್‌ ಹಿಟ್‌ ಬಾಲಿವುಡ್‌ ಚಿತ್ರ ‘ಬಾರ್ಡರ್‌’ಗೆ ಸ್ಫೂರ್ತಿ ಆಗಿದ್ದರು. ರಾಥೋಡ್‌ ಪಾತ್ರವನ್ನು ನಟ ಸುನೀಲ್‌ ಶೆಟ್ಟಿ ನಿರ್ವಹಿಸಿದ್ದರು.

‘ವೀರಹೃದಯ ಇಂದು ಜೋಧಪುರ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ’ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಟ್ವೀಟ್‌ ಮಾಡಿದೆ. 1971ರ ಯುದ್ಧ ನಡೆದು 51 ವರ್ಷಗಳಾಗುವ 2 ದಿನ ಮುಂಚೆ ಅವರು ಮೆದುಳಿನ ಸ್ಟ್ರೋಕ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಸವಾಯಿ ಸಿಂಗ್‌ ಹೇಳಿದ್ದಾರೆ.

1971ರಲ್ಲಿ ರಾಜಸ್ಥಾನದ ಥಾರ್‌ ಮರೂಭೂಮಿಯಲ್ಲಿ ನಿಯೋಜನೆಯಾದ ಚಿಕ್ಕ ಬಿಎಸ್‌ಎಫ್‌ ತುಕಡಿಯನ್ನು ಮುನ್ನಡೆಸುತ್ತಿದ್ದ ರಾಥೋಡ್‌, ಪಾಕಿಸ್ತಾನ್‌ ಬ್ರಿಗೇಡ್‌ ಹಾಗೂ ಟ್ಯಾಂಕ್‌ ರೆಜಿಮೆಂಟ್‌ ಅನ್ನು ನಾಶಗೊಳಿಸಿದ್ದರು. ತಮ್ಮ ಜತೆಗಿದ್ದ ಪಂಜಾಬ್‌ ರೆಜಿಮೆಂಟ್‌ನ ಒಬ್ಬ ಯೋಧ ಸಾವನ್ನಪ್ಪಿದಾಗ ಪಾಕ್‌ ಸೇನೆಯ ವಿರುದ್ಧ ಲಘು ಮಶಿನ್‌ ಮೂಲಕ ತಿರುಗಿಬಿದ್ದು, ಸೇಡು ತೀರಿಸಿಕೊಂಡಿದ್ದರು. ಇವರಿಗೆ 1972ರಲ್ಲಿ ಸೇನಾ ಮೆಡಲ್‌ ನೀಡಿ ಗೌರವಿಸಲಾಗಿತ್ತು.

ಬಿಎಸ್ ಎಫ್ ಟ್ವೀಟ್ ಶೇರ್ ಮಾಡಿರುವ ನಟ ಸುನೀಲ್ ಶೆಟ್ಟಿ ಭೈರೋನ್‌ ಸಿಂಗ್‌ ರಾಥೋಡ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಸುನೀಲ್ ಶೆಟ್ಟಿ ಅವರು ತಮ್ಮ ಭಾರತ್ ಮಾತೆಯನ್ನು ಅನಂತವಾಗಿ ಪ್ರೀತಿಸುವ ಸೇನಾಧಿಕಾರಿಯ ಪಾತ್ರದೊಂದಿಗೆ ಸಿಂಗ್ ಅವರನ್ನು ಅಮರಗೊಳಿಸಿದ್ದಾರೆ. ಜೆಪಿ ದತ್ತಾ ನಿರ್ದೇಶಿಸಿದ ಬಾರ್ಡರ್ ಸಿನಿಮಾದಲ್ಲಿ ಹಲವು ನಾಯಕರು ನಟಿಸಿದ್ದರು. ಈ ಸಿನಿಮಾ 1997 ರಲ್ಲಿ ಬಿಡುಗಡೆಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com