ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಸಿದ್ಧತೆಯ ಅಣಕು ಪ್ರದರ್ಶನ ನಡೆಸಿ, ಜನದಟ್ಟಣೆ ತಪ್ಪಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಚೀನಾ, ಜಪಾನ್, ಬ್ರೆಜಿನ್ ಮತ್ತು ಅಮೆರಿಕಾ ದೇಶಗಳಲ್ಲಿ ಕೋವಿಡ್ ಸೋಂಕಿನ ಹಾವಳಿ ಹೆಚ್ಚಾಗುತ್ತಿದೆ. ನಾಳೆಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆ, ನಂತರ ಹೊಸ ವರ್ಷಾಚರಣೆ ಸಮಯದಲ್ಲಿ ಜನಜಂಗುಳಿ ಸಂಭ್ರಮಾಚರಣೆ, ಓಡಾಟ ಹೆಚ್ಚಿರುತ್ತದೆ.
ಕೇಂದ್ರ ಆರೋಗ್ಯ ಸಚಿವ ಮನ್ಸ್ ಖ್ ಮಾಂಡವೀಯ
ಕೇಂದ್ರ ಆರೋಗ್ಯ ಸಚಿವ ಮನ್ಸ್ ಖ್ ಮಾಂಡವೀಯ
Updated on

ನವದೆಹಲಿ: ಚೀನಾ, ಜಪಾನ್, ಬ್ರೆಜಿನ್ ಮತ್ತು ಅಮೆರಿಕಾ ದೇಶಗಳಲ್ಲಿ ಕೋವಿಡ್ ಸೋಂಕಿನ ಹಾವಳಿ ಹೆಚ್ಚಾಗುತ್ತಿದೆ. ನಾಳೆಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆ, ನಂತರ ಹೊಸ ವರ್ಷಾಚರಣೆ ಸಮಯದಲ್ಲಿ ಜನಜಂಗುಳಿ ಸಂಭ್ರಮಾಚರಣೆ, ಓಡಾಟ ಹೆಚ್ಚಿರುತ್ತದೆ.

ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಸರ್ಕಾರಗಳು ಆಯಾ ರಾಜ್ಯಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ, ಕೊರೋನಾ ತಪಾಸಣೆ ಹೆಚ್ಚಿಸುವಂತೆ, ಜನರು ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸುವಂತೆ, ಜನದಟ್ಟಣೆ ಸೇರದಂತೆ ನೋಡಿಕೊಳ್ಳಬೇಕೆಂದು ಸೂಚನೆ ಹೊರಡಿಸಿದೆ.

ನಿನ್ನೆ ಕೇಂದ್ರ ಆರೋಗ್ಯ ಸಚಿವ ಮನ್ಸ್ ಖ್ ಮಾಂಡವೀಯ ಕೋವಿಡ್ ರಾಜ್ಯಗಳ ಆರೋಗ್ಯ ಸಚಿವರುಗಳೊಂದಿಗೆ ಕೋವಿಡ್ ಪರಿಶೀಲನಾ ಸಭೆ ನಡೆಸಿದ್ದು, ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿಗಳಿಗೆ ತಯಾರಾಗಿರುವಂತೆ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕೆಂದು ಮತ್ತು ತುರ್ತು ಪರಿಸ್ಥಿತಿ ಎದುರಾದಾಗ ಆಸ್ಪತ್ರೆಗಳು ಯಾವ ರೀತಿ ಎದುರಿಸುತ್ತವೆ ಎಂದು ನೋಡಲು ಅಣಕು ಪ್ರದರ್ಶನ ನಡೆಸುವಂತೆ ಸೂಚಿಸಿದ್ದಾರೆ.

ಈ ಆದೇಶದ ಮೂಲಕ, ಡಿಸೆಂಬರ್ 27ರಂದು ದೇಶಾದ್ಯಂತ ಪ್ರಮುಖ ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ ನಡೆಸಲಿದ್ದಾರೆ. ಒಂದು ಕಡೆ ಆರೋಗ್ಯ ಸಚಿವರು ಕೂಡ ಇರುತ್ತಾರೆ. 

ಒಟ್ಟಾರೆಯಾಗಿ ಆಸ್ಪತ್ರೆಯಲ್ಲಿ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ. ಕೊರೋನಾ ಪರೀಕ್ಷೆಯನ್ನು ಪ್ರಸ್ತುತ ಪ್ರತಿ ಮಿಲಿಯನ್‌ಗೆ ತ್ವರಿತವಾಗಿ ಹೆಚ್ಚಿಸಲು ಕೋರಿದ್ದಾರೆ.

ಸಭೆಯ ನಂತರ ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಮನ್ಸ್ ಖ್ ಮಾಂಡವಿಯಾ, ರಾಜ್ಯ ಆರೋಗ್ಯ ಮಂತ್ರಿಗಳೊಂದಿಗಿನ COVID-19 ಪರಿಶೀಲನಾ ಸಭೆಯಲ್ಲಿ ಎಚ್ಚರಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಗಾಬರಿಯಾಗುವ ಅಗತ್ಯವಿಲ್ಲ. ನಮಗೆ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಮೂರು ವರ್ಷಗಳ ಅನುಭವವಿದೆ. COVID-19 ನ್ನು ಎದುರಿಸಲು ಕೇಂದ್ರ ಸರ್ಕಾರವು ಎಲ್ಲಾ ಬೆಂಬಲವನ್ನು ನೀಡುತ್ತದೆ. ಅಗತ್ಯಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕೊರೋನಾ ಪರೀಕ್ಷೆ, ಜೀನೋಮ್ ಅನುಕ್ರಮವನ್ನು ಹೆಚ್ಚಿಸುವ ಮೂಲಕ ಮತ್ತು COVID-ಸೂಕ್ತ ನಡವಳಿಕೆಯನ್ನು ಅನುಸರಿಸುವ ಮೂಲಕ ಪೂರ್ವಭಾವಿ ವಿಧಾನದೊಂದಿಗೆ ಸಾಂಕ್ರಾಮಿಕ ರೋಗವನ್ನು ಎದುರಿಸಲು ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಮುಂಬರುವ ಹಬ್ಬಗಳ ಸಿದ್ಧತೆಯ ದೃಷ್ಟಿಯಿಂದ, ಜನಸಂದಣಿಯನ್ನು ತಪ್ಪಿಸಬೇಕೆಂದು ಕೋರಿದ್ದಾರೆ. ವ್ಯಾಪಾರ ಮಾಲೀಕರು, ಮಾರುಕಟ್ಟೆ ಸಂಘಗಳು ಮುಂತಾದ ಸಂಬಂಧಿತ ಪಾಲುದಾರರೊಂದಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಒಳಾಂಗಣ ಪ್ರದೇಶದಲ್ಲಿ ಜನದಟ್ಟಣೆ ಸೇರುವುದನ್ನು ತಪ್ಪಿಸಬೇಕೆಂದು ಅವರು ವಿಶೇಷವಾಗಿ ಸೂಚಿಸಿದರು.

ಜಾಗತಿಕವಾಗಿ, ಕೋವಿಡ್ -19 ಪ್ರಕರಣಗಳು ಏರಿಕೆ ಕಾಣುತ್ತಿದ್ದರೂ, ಕಳೆದ ಹಲವಾರು ದಿನಗಳಿಂದ ಭಾರತದಲ್ಲಿ ಸರಾಸರಿ 153 ಪ್ರಕರಣಗಳು ವರದಿಯಾಗುತ್ತಿವೆ. ಇದು ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಕಡಿಮೆಯಾಗಿದೆ.

ಕೊರೋನಾ ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ವ್ಯಾಕ್ಸಿನೇಷನ್ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದರ ಮೇಲೆ ಗಮನ ನೀಡುವ ಮೂಲಕ ರೋಗದ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಾದ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಇತರ ವ್ಯವಸ್ಥೆಗಳನ್ನು ಹಾಕುವ ಅವಶ್ಯಕತೆಯಿದೆ ಎಂದು ಸಚಿವಾಲಯ ಹೇಳಿದೆ. ಮಾಸ್ಕ್ ಕಡ್ಡಾಯ ಬಳಕೆ, ಕೈ ತೊಳೆಯುವುದು, ಉಸಿರಾಟದ ನೈರ್ಮಲ್ಯ ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಒಮಿಕ್ರಾನ್ ಉಪ ರೂಪಾಂತರಿ BF.7 ನ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. 

ಮೊನ್ನೆ ಆರೋಗ್ಯ ಸಚಿವಾಲಯವು ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇಕಡಾ ಎರಡರಷ್ಟು ಪರೀಕ್ಷೆಯನ್ನು ಶನಿವಾರದಿಂದ ನಡೆಸಲಾಗುವುದು ಎಂದು ಘೋಷಿಸಿದೆ.

ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ದೆಹಲಿ, ರಾಜಸ್ಥಾನ, ಉತ್ತರಾಖಂಡ, ಅಸ್ಸಾಂ, ಜಾರ್ಖಂಡ್, ಪುದುಚೇರಿ, ತ್ರಿಪುರಾ, ಪಂಜಾಬ್, ಛತ್ತೀಸ್‌ಗಢ, ಮಣಿಪುರ, ಹರಿಯಾಣದ ಆರೋಗ್ಯ ಸಚಿವರು ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com