ಉದಯಪುರ (ರಾಜಸ್ತಾನ): ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಜುಲೈ 12ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಸ್ಟಡಿಗೆ ಕಳುಹಿಸಲಾಗಿದೆ.
ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಲಾಯರ್ ಗಳು ಹತ್ಯೆ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದು ಅಲ್ಲದೆ ಬಾಟಲಿಗಳನ್ನು ಅವರ ಮೇಲೆ ಎಸೆದಿದ್ದಾರೆ.
ಜೂನ್ 28ರಂದು ಹಾಡುಹಗಲೇ ಆರೋಪಿಗಳು ಹಿಂದೂ ವ್ಯಕ್ತಿ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಉದಯಪುರ ಹತ್ಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದಕ್ಕೆ ಟೈಲರ್ ಅವರನ್ನು ಹತ್ಯೆ ಮಾಡಲಾಗಿತ್ತು.
ಇಬ್ಬರು ಪ್ರಮುಖ ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗುತ್ತಿದ್ದಾಗ ರಾಜಸ್ತಾನ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದರು. ಏತನ್ಮಧ್ಯೆ, ಗುಪ್ತಚರ ಮೂಲಗಳು, ಪ್ರಮುಖ ಆರೋಪಿಯನ್ನು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳು ಸಲ್ಮಾನ್ ಹೈದರ್ ಮತ್ತು ಅಬು ಇಬ್ರಾಹಿಂ ಎಂದು ಗುರುತಿಸಿದ್ದಾರೆ. ನೂಪುರ್ ಶರ್ಮಾ ಅವರು ಪ್ರವಾದಿಯವರ ಬಗ್ಗೆ ಮಾಡಿದ ಹೇಳಿಕೆಗಳ ವಿವಾದದ ಹಿನ್ನೆಲೆಯಲ್ಲಿ ಹೈದರ್ ಮತ್ತು ಇಬ್ರಾಹಿಂ ಇಬ್ಬರು ಆರೋಪಿಗಳನ್ನು ದೊಡ್ಡ ದಾಳಿ ನಡೆಸಲು ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್ ಭಯೋತ್ಪಾದಕ ದಾಳಿಗಳನ್ನು ನಡೆಸಲು ಆರ್‌ಡಿಎಕ್ಸ್‌ನಂತಹ ಸ್ಫೋಟಕಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇಬ್ಬರೂ 'ಏನಾದರೂ ದೊಡ್ಡದನ್ನು ಮಾಡುವ' ಬಗ್ಗೆ ಮಾತನಾಡಿದ್ದರು ಎಂದು ಹೇಳಿದರು.
Advertisement