ಮಹಾ ಸಿಎಂ ಏಕನಾಥ್ ಶಿಂಧೆ ವಿರುದ್ಧ ಮತಚಲಾಯಿಸಿದ ಆದಿತ್ಯ ಠಾಕ್ರೆಗೆ ಅನರ್ಹತೆ ಭೀತಿ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ನಡೆದ ಬಲಾಬಲ ಪರೀಕ್ಷೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಮತ ಹಾಕುವಂತೆ ಜಾರಿಗೊಳಿಸಲಾಗಿದ್ದ ವಿಪ್ ಅನ್ನು ಧಿಕ್ಕರಿಸಿದ ಶಿವಸೇನಾ ಶಾಸಕ ಆದಿತ್ಯ ಠಾಕ್ರೆ...
ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ನಡೆದ ಬಲಾಬಲ ಪರೀಕ್ಷೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಮತ ಹಾಕುವಂತೆ ಜಾರಿಗೊಳಿಸಲಾಗಿದ್ದ ವಿಪ್ ಅನ್ನು ಧಿಕ್ಕರಿಸಿದ ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಅವರಿಗೆ ಈಗ ಅನರ್ಹತೆಯ ಭೀತಿ ಎದುರಾಗಿದೆ.

ಬಂಡಾಯ ಪಾಳಯದಿಂದ ಆಯ್ಕೆಯಾದ ಮುಖ್ಯ ಸಚೇತಕರು ಏಕನಾಥ್ ಶಿಂಧೆ ಸರ್ಕಾರಕ್ಕೆ ಮತ ಹಾಕುವಂತೆ ಶಿವಸೇನೆಯ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿತ್ತು. ನಿನ್ನೆ ಚುನಾಯಿತರಾದ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಮಧ್ಯರಾತ್ರಿಯ ಸಮಯದಲ್ಲಿ ಮುಖ್ಯ ಸಚೇತಕರನ್ನು ಅನುಮೋದಿಸಿದ್ದರು.

ಕಳೆದ ವಾರ ತನ್ನ ತಂದೆ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ ಬಂಡಾಯ ನಾಯಕ ಏಕನಾಥ್ ಶಿಂಧೆ ವಿರುದ್ಧ ಮತ ಚಲಾಯಿಸುವ ಮೂಲಕ ಆದಿತ್ಯ ಠಾಕ್ರೆ ಅವರು ವಿಪ್ ಅನ್ನು ಉಲ್ಲಂಘಿಸಿದ್ದಾರೆ. ಇದರಿಂದ ಆದಿತ್ಯ ಠಾಕ್ರೆ ಅನರ್ಹತೆಯನ್ನು ಎದುರಿಸಬಹುದು. ಆದರೆ ಮುಂದಿನ ಸೋಮವಾರ ಸುಪ್ರೀಂ ಕೋರ್ಟ್‌ನ ನಿರ್ಧಾರದ ಮೇಲೆ ಅದು ನಿರ್ಧಾರವಾಗುತ್ತದೆ ಎಂದು ಠಾಕ್ರೆ ಟೀಂ ಆಶಿಸುತ್ತಿದೆ.

ಶಿಂಧೆ ಟೀಂ ಘೋಷಿಸಿರುವ ಹೊಸ ಪಕ್ಷದ ವಿಪ್ ಅನ್ನು ಗುರುತಿಸುವ ಹೊಸ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಠಾಕ್ರೆ ಟೀಂ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಠಾಕ್ರೆ ತಂಡವು, ಶಿಂಧೆ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ನ್ಯಾಯಾಲಯವು ಇನ್ನೂ ನಿರ್ಧರಿಸದಿರುವಾಗ ವಿಪ್‌ಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಒಂದು ವೇಳೆ ಶಿಂಧೆ ಮತ್ತು ಇತರ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ದೃಢೀಕರಿಸಿದರೆ ಅದು ಹೊಸ ಸರ್ಕಾರದ ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಕಾರಣವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com