ದಾರಿತಪ್ಪಿದ, ಮೋಸ ಹೋದವರು: ನಿರುದ್ಯೋಗಿಗಳು ಈ ‘ಅಸಂಸದೀಯ’ ಪದ ಬಳಸಬಹುದೇ - ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ನವದೆಹಲಿ: ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಭಾರತದ ನಿರುದ್ಯೋಗಿ ಯುವಕರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ನಿಮ್ಮ ಸುಳ್ಳು ಭರವಸೆ ದಾರಿ ತಪ್ಪಿಸುವ, ದ್ರೋಹ ಬಗೆದ ಮತ್ತು ವಂಚಿಸಿದ ಎಂಬ "ಅಸಂಸದೀಯ" ಪದಗಳನ್ನು ಬಳಸಬಹುದೇ ಎಂದು ಕೇಳಿದ್ದಾರೆ.
2017-18 ರಿಂದ 2021-22 ರವರೆಗೆ ಐದು ವರ್ಷಗಳಲ್ಲಿ ನಿರುದ್ಯೋಗ ದ್ವಿಗುಣಗೊಂಡಿದೆ ಎಂದು ತೋರಿಸಿರುವ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE)ಯ ದತ್ತಾಂಶವನ್ನು ಆಧರಿಸಿದ ಗ್ರಾಫ್ ಅನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಗ್ರಾಫ್ ಕಳೆದ ಐದು ವರ್ಷಗಳಲ್ಲಿ ನಿರುದ್ಯೋಗದ ಶೇಕಡಾವಾರು ಪ್ರಮಾಣವನ್ನು ತೋರಿಸಿದೆ: "ಪ್ರಧಾನಿಯವರೇ, ವರ್ಷಕ್ಕೆ 2 ಕೋಟಿ ಉದ್ಯೋಗಗಳು ಎಲ್ಲಿವೆ?" "ದಾರಿ ತಪ್ಪಿದ. ದ್ರೋಹ ಬಗೆದ, ಮೋಸ ಮಾಡಿದ ಪ್ರಧಾನಿ. ಭಾರತದ ನಿರುದ್ಯೋಗಿ ಯುವಕರು ನಿಮ್ಮ ಸುಳ್ಳುಗಳಿಗೆ ಈ 'ಅಸಂಸದೀಯ' ಪದಗಳನ್ನು ಬಳಸಬಹುದೇ?" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸೋಮವಾರ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುನ್ನ ಅಸಂಸದೀಯ ಪದಗಳೆಂದು ಪಟ್ಟಿ ಮಾಡಿ ಅವುಗಳನ್ನ ಸದನದಲ್ಲಿ ಬಳಸಬಾರದೆಂದು ಲೋಕಸಭೆ ಸಚಿವಾಲಯ ಹೊರಡಿಸಿರುವ ಹೊಸ ಕಿರುಹೊತ್ತಿಗೆಯಲ್ಲಿನ ಪದಗಳಿಗೆ ಭಾರೀ ವಿರೋಧ ವ್ಯಕ್ತವಾದ ನಂತರ ರಾಹುಲ್ ಗಾಂಧಿ ಈ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ