ಕಲ್ಲಕುರಿಚಿ(ತಮಿಳುನಾಡು): ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕಲ್ಲಕುರಿಚಿ ತಾಲೂಕು ಮತ್ತು ಚಿನ್ನಸೇಲಂ ತಾಲೂಕಿನ ಕೆಲವು ಭಾಗಗಳಲ್ಲಿ ಜುಲೈ 31ರವರೆಗೆ ಸೆಕ್ಷನ್ 144 ರ ಅಡಿಯಲ್ಲಿ ಜಿಲ್ಲಾಧಿಕಾರಿ ಪಿಎನ್ ಶ್ರೀಧರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ನುಗ್ಗಿ ಶಾಲಾ ಬಸ್ಸು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆ ತಮಿಳು ನಾಡಿನ ಕಲ್ಲಕುರಿಚಿ ಜಿಲ್ಲೆಯ ಕನ್ನಿಯಮೂರಿನಲ್ಲಿ ನಡೆದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕರ ಕಿರುಕುಳ ತಾಳಲಾರದೆ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದ್ದು, ತಮಿಳು ನಾಡು ಶಾಲಾ ಶಿಕ್ಷಣ ಇಲಾಖೆ ಘಟನೆಗೆ ಸಂಬಂಧಿಸಿದಂತೆ ವಿವರವಾದ ವರದಿ ನೀಡುವಂತೆ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕಲ್ಲಕುರಿಚಿಯ ಚಿನ್ನಸಲೇಂ ಎಂಬಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಪ್ರತಿಭಟನಾಕಾರರು ಶಾಲೆಯ ಅವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ನಿಲ್ಲಿಸಿದ್ದ ಶಾಲಾ ಬಸ್ಸುಗಳ ಕಿಟಕಿ ಗಾಜುಗಳನ್ನು ಮುರಿದು ಬೆಂಕಿ ಹಚ್ಚಿದರು. ಬಸ್ಸಿನ ಮೇಲೆ ಏರಿ ಕೇಕೆ ಹಾಕುತ್ತಾ, ಆಕ್ರೋಶ ವ್ಯಕ್ತಿಪಡಿಸುತ್ತಾ ಧ್ವಂಸ ಮಾಡಿದರು. ಹಲವು ಬಸ್ಸುಗಳು ತಲೆಕೆಳಗಾಗಿ ಬಿದ್ದವು. ಬೆಂಕಿ ಹಚ್ಚಿದ್ದರಿಂದ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತು.
ಪರಿಸ್ಥಿತಿಯನ್ನು ತಿಳಿಗೊಳಿಸಲು ಕಲ್ಲಕುರಿಚಿ ಜಿಲ್ಲಾ ಪೊಲೀಸರು ಲಾಠಿಪ್ರಹಾರ ಮಾಡಿದರು. ಆಶ್ರುವಾಯು ಸಿಡಿಸಿದರು. ಆಗ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಡಿಐಜಿ ಎಂ ಪಾಂಡಿಯಾನ್ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. 13ಕ್ಕೂ ಹೆಚ್ಚು ಬಸ್ಸುಗಳಿಗೆ ಬೆಂಕಿ ಹಚ್ಚಿ ಕೆಲವು ಬಸ್ಸುಗಳನ್ನು ಜಖಂಗೊಳಿಸಿದ್ದಾರೆ.
ಶಾಲೆಯ ಕಿಟಕಿ,ಗಾಜುಗಳನ್ನು ಮುರಿದು ತರಗತಿಯೊಳಗೆ, ಶಿಕ್ಷಕರು, ಪ್ರಾಂಶುಪಾಲರ ಕೊಠಡಿಯೊಳಗೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೃಹ ಇಲಾಖೆ ಕಾರ್ಯದರ್ಶಿಗಳು ಮತ್ತು ಡಿಜಿಪಿಯವರಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ನಡೆದ ಘಟನೆಯೇನು?: ಮೊನ್ನೆ ಜುಲೈ 13 ರಂದು ಮುಂಜಾನೆ ಕಡಲೂರು ಜಿಲ್ಲೆಯ ಪೆರಿಯನೆಸಲೂರು ಗ್ರಾಮದ 17 ವರ್ಷದ ಶ್ರೀಮತಿ ಎಂಬ ವಿದ್ಯಾರ್ಥಿನಿ ಶಾಲೆಯ ಹಾಸ್ಟೆಲ್ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಶಾಲೆಯು ಕಲ್ಲಕುರಿಚಿ ಜಿಲ್ಲೆಯ ಚಿನ್ನಸೇಲಂ ಬಳಿಯ ಕಣಿಯಮೂರ್‌ನಲ್ಲಿದೆ. 12ನೇ ತರಗತಿ ವಿದ್ಯಾರ್ಥಿನಿ ಶ್ರೀಮತಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.
ಹಾಸ್ಟೆಲ್‌ನ ಮೂರನೇ ಮಹಡಿಯ ಕೊಠಡಿಯೊಂದರಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಮೇಲಿನ ಮಹಡಿಯಿಂದ ನೆಲಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹಕ್ಕೆ ಗಾಯವಾಗಿದ್ದು ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಂದಿನಿಂದ ಶ್ರೀಮತಿ ಅವರ ಕುಟುಂಬ ಸದಸ್ಯರು ಮತ್ತು ಅವರ ಗ್ರಾಮದ ಜನರು ಕಲ್ಲಾಕುರಿಚಿಯ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಯ ಮುಂದೆ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಶ್ರೀಮತಿ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಆಕೆಯ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಶವವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಶವ ಪರೀಕ್ಷೆ ಮುಗಿದರೂ ವಿದ್ಯಾರ್ಥಿನಿ ಶವ ಆಸ್ಪತ್ರೆಯಲ್ಲಿದೆ. ಪೋಷಕರು, ಸ್ಥಳೀಯರ ಬೇಡಿಕೆ ಪ್ರತಿಭಟನೆಗೆ ವಿವಿಧ ರಾಜಕೀಯ ಪಕ್ಷಗಳ ಸಂಘಟನೆ ಮತ್ತು ಎಡಪಕ್ಷದ ಯುವ ಘಟಕದ ಬೆಂಬಲವಿದೆ.
ನಿನ್ನೆ ವಿದ್ಯಾರ್ಥಿನಿಯರ ಶವಪರೀಕ್ಷೆ ವರದಿ ಬಂದ ನಂತರವೂ ಕುಟುಂಬ ಸದಸ್ಯರು ವರದಿಯನ್ನು ತಿರಸ್ಕರಿಸಿ ನಾಲ್ಕು ರಸ್ತೆಗಳ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು. ಕುಟುಂಬಸ್ಥರು, ಸಂಬಂಧಿಕರು ವರದಿಯನ್ನು ನಕಲಿ ಎಂದು ಆರೋಪಿಸುತ್ತಿದ್ದಾರೆ. ಪ್ರಕರಣವನ್ನು ಸಿಬಿ-ಸಿಐಡಿ ತನಿಖೆ ನಡೆಸಿ ಆಕೆಯ ಸಾವಿಗೆ ಕಾರಣರಾದವರನ್ನು ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
Advertisement