ಹಣದುಬ್ಬರ, ಬೆಲೆಯೇರಿಕೆ ಗದ್ದಲ: ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

ಹೆಚ್ಚುತ್ತಿರುವ ಹಣದುಬ್ಬರ, ಕೆಲವು ಅಗತ್ಯ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಹೇರಿಕೆ ಮತ್ತು ಅಗ್ನಿಪಥ್ ಯೋಜನೆ ವಿರುದ್ಧ ಭೋಜನ ವಿರಾಮದ ನಂತರವೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಭಾರಿ...
ರಾಜ್ಯಸಭೆ
ರಾಜ್ಯಸಭೆ
Updated on

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ, ಕೆಲವು ಅಗತ್ಯ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಹೇರಿಕೆ ಮತ್ತು ಅಗ್ನಿಪಥ್ ಯೋಜನೆ ವಿರುದ್ಧ ಭೋಜನ ವಿರಾಮದ ನಂತರವೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಭಾರಿ ಕೋಲಾಹಲ ಸೃಷ್ಟಿಸಿದವು. ಉಪ ಸಭಾಪತಿ ಹರಿವಂಶ್ ಅವರು ಭೋಜನ ವಿರಾಮದ ನಂತರ ಕಲಾಪ ಆರಂಭಿಸಲು ಮುಂದಾದರು. ಈ ವೇಳೆ ಪ್ರತಿಪಕ್ಷ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದಾಗ ಹರಿವಂಶ್ ಸದನವನ್ನು ನಾಳೆಗೆ ಮುಂದೂಡಿದರು.

ಇದಕ್ಕೂ ಮುನ್ನ ಬೆಳಗ್ಗೆ ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳು ಬೇಡಿಕೆ ಇಟ್ಟವು. ಆದರೆ, ಸಭಾಪತಿ ಎಂ.ವೆಂಕಯ್ಯ ನಾಯ್ಡು ಅದನ್ನು ತಿರಸ್ಕರಿಸಿದರು. ಇದನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಬೇಕಾಯಿತು.

ನಿಯಮ 267 ರ ಅಡಿಯಲ್ಲಿ ಹಣದುಬ್ಬರ ಸಮಸ್ಯೆಯನ್ನು ಚರ್ಚಿಸಲು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಕೆಲವು ನಾಯಕರಿಂದ ನೋಟಿಸ್ ಸ್ವೀಕರಿಸಲಾಗಿದೆ. ಆದರೆ, ಈ ನೋಟಿಸ್‌ಗಳನ್ನು ತಿರಸ್ಕರಿಸಿರುವುದಾಗಿ ಸಭಾಪತಿ ತಿಳಿಸಿದರು.

ಇತರ ವಿಷಯಗಳ ಚರ್ಚೆಯ ಸಮಯದಲ್ಲಿ ಬೇಡಿಕೆ ಇಟ್ಟ ವಿಷಯಗಳನ್ನು ಚರ್ಚಿಸಬಹುದು ಎಂದು ನಾಯ್ಡು ಹೇಳಿದರು. ಹಣದುಬ್ಬರದ ವಿಷಯವನ್ನೂ ಆಗ ಚರ್ಚಿಸಬಹುದು. ಆದರೆ ಈಗ ನಿಗದಿಪಡಿಸಿದ ಅಜೆಂಡಾವನ್ನು ಇತ್ಯರ್ಥಪಡಿಸಬೇಕಾಗಿದೆ ಎಂದು ಸಭಾಪತಿ ಹೇಳಿದರು. ಇದಕ್ಕೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸದಸ್ಯರ ಬಿರುಸಿನ ವರ್ತನೆ ಕಂಡು ಸಭಾಪತಿಯವರು ಸದನದ ಕಲಾಪವನ್ನು 2 ಗಂಟೆಗೆ ಮುಂದೂಡಿದರು.

ಹೀಗಾಗಿ ಮುಂಗಾರು ಅಧಿವೇಶನದಲ್ಲಿ ಸತತ ಎರಡನೇ ದಿನವೂ ಹಣದುಬ್ಬರ ಮತ್ತಿತರ ವಿಷಯಗಳ ಕುರಿತು ಚರ್ಚೆಗೆ ಆಗ್ರಹಿಸಿ ಕೋಲಾಹಲ ಉಂಟಾಗಿ ಕಲಾಪಕ್ಕೆ ಅಡ್ಡಿಯಾಗಿದೆ. ಇದೇ ವಿಚಾರವಾಗಿ ಸಂಸತ್ ಅಧಿವೇಶನದ ಮೊದಲ ದಿನದ ಕಲಾಪವೂ ಮುಂದೂಡಲ್ಪಟ್ಟಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com