ಸೋನಿಯಾ ಗಾಂಧಿ ಇಡಿ ವಿಚಾರಣೆ: ಸಂಸತ್ತು ಕಲಾಪದಲ್ಲಿ ಕಾಂಗ್ರೆಸ್ ನಿಂದ ನಿಲುವಳಿ ಸೂಚನೆ ಮಂಡನೆ, ಭಾರೀ ಪ್ರತಿಭಟನೆಗೆ ಸಜ್ಜು

ರಾಷ್ಟ್ರ ರಾಜಧಾನಿಯ ಸಂಸತ್ತು ಒಳಗೆ ಮುಂಗಾರು ಅಧಿವೇಶನದಲ್ಲಿ ಮತ್ತು ಹೊರಗೆ ದೆಹಲಿಯ ಪ್ರಮುಖ ರಾಜಕೀಯ ಚಟುವಟಿಕೆ ಕೇಂದ್ರಗಳಲ್ಲಿ ಇಂದು ಗುರುವಾರ ಪ್ರಮುಖ ಘಟನಾವಳಿಗಳು ನಡೆಯುವ ಸಾಧ್ಯತೆಯಿದೆ. ಕಾರಣ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಂದು ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಇಡಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. 
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ರಾಷ್ಟ್ರ ರಾಜಧಾನಿಯ ಸಂಸತ್ತು ಒಳಗೆ ಮುಂಗಾರು ಅಧಿವೇಶನದಲ್ಲಿ ಮತ್ತು ಹೊರಗೆ ದೆಹಲಿಯ ಪ್ರಮುಖ ರಾಜಕೀಯ ಚಟುವಟಿಕೆ ಕೇಂದ್ರಗಳಲ್ಲಿ ಇಂದು ಗುರುವಾರ ಪ್ರಮುಖ ಘಟನಾವಳಿಗಳು ನಡೆಯುವ ಸಾಧ್ಯತೆಯಿದೆ. ಕಾರಣ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಂದು ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಇಡಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. 

ದೆಹಲಿಯ ಕಾಂಗ್ರೆಸ್ ಕಚೇರಿ ಮುಂದೆ ಈಗಾಗಲೇ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸೋನಿಯಾ ಗಾಂಧಿಯವರನ್ನು ಬೆಂಬಲಿಸಿ, ಕೇಂದ್ರ ಎನ್ ಡಿಎ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸೋನಿಯಾ ಗಾಂಧಿ ಜಿಂದಾಬಾದ್ ಎಂದು ಕೂಗುತ್ತಿದ್ದಾರೆ.

ಎಐಸಿಸಿ ಕೇಂದ್ರ ಕಚೇರಿಯಿರುವ ಅಕ್ಬರ್ ರಸ್ತೆಯಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ. ಅಲ್ಲಿ ಕೂಡ ಇಂದು ತೀವ್ರ ಸಂಚಾರ ದಟ್ಟಣೆಯಾಗಲಿರುವ ಸಾಧ್ಯತೆಯಿರುವುದರಿಂದ ಸಂಚಾರ ಮಾರ್ಗ ಬದಲಾಯಿಸಿ ದೆಹಲಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. 

ಕಾಂಗ್ರೆಸ್ ಸಂಸದರಿಂದ ನಿಲುವಳಿ ಸೂಚನೆ: ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರ ಬಗ್ಗೆ ಚರ್ಚೆಯಾಗಬೇಕೆಂದು ಕಾಂಗ್ರೆಸ್ ಸಂಸದ ಮಣಿಕ್ಕಮ್ ಠಾಗೋರ್ ಇಂದು ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ನಿಲುವಳಿ ಸೂಚನೆ ಮಂಡಿಸಿದರು. 

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಕೂಡ ಲೋಕಸಭೆಯಲ್ಲಿ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳಗಳನ್ನು (ಸಿಬಿಐ) ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಆ ವಿಷಯದ ಬಗ್ಗೆ ಚರ್ಚಿಸಬೇಕೆಂದು ನಿಲುವಳಿ ಸೂಚನೆ ಮಂಡಿಸಿದರು.

ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಅವರು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಸೇರಿದಂತೆ ದೇಶದ ಕೇಂದ್ರೀಯ ಸಂಸ್ಥೆಗಳನ್ನು ಆಡಳಿತ ಪಕ್ಷವು ಹಲವಾರು ರಾಜಕೀಯ ಪಕ್ಷಗಳ ಪ್ರಮುಖ ನಾಯಕರನ್ನು ಗುರಿಯಾಗಿಸಲು ಮತ್ತು ಕಿರುಕುಳ ನೀಡಲು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿ ಕಲಾಪವನ್ನು ಮುಂದೂಡಬೇಕೆಂದು ಸೂಚನೆ ಮಂಡಿಸಿದರು.

 ವಿರೋಧ ಪಕ್ಷದ ನಾಯಕರು ಸಹಿ ಹಾಕಿ ಈ ಕುರಿತು ಜಂಟಿ ಪ್ರಕಟಣೆ ಹೊರಡಿಸಿದ್ದಾರೆ. 

ಕಾಂಗ್ರೆಸ್ ನಿಂದ ದೇಶಾದ್ಯಂತ ಬೃಹತ್ ಪ್ರತಿಭಟನೆ: ತಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ, ಕೇಂದ್ರ ಸರ್ಕಾರದ ರಾಜಕೀಯ ಸೇಡು ಎಂದು ಆರೋಪಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ.

ಕಾಂಗ್ರೆಸ್ ಸಂಸದರು ಸೇರಿದಂತೆ ಪಕ್ಷದ ಮುಖಂಡರು ಜಾರಿ ನಿರ್ದೇಶನಾಲಯ ಕಚೇರಿ ಕಡೆಗೆ ಮೆರವಣಿಗೆ ನಡೆಸಲಿದ್ದು, ಸಂಸತ್ತುವರೆಗೆ ಪ್ರತಿಭಟನಾ ಮೆರವಣಿಗೆ ಸಾಗಲಿದ್ದಾರೆ. ಅದಕ್ಕೂ ಮುನ್ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆದಿದ್ದು, ಪಕ್ಷದ ಕಾರ್ಯತಂತ್ರ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com