ನಾಗಾಲ್ಯಾಂಡ್ ನಾಗರೀಕರ ಹತ್ಯೆ: 21 ಪ್ಯಾರಾ ವಿಶೇಷ ಪಡೆಯ 30 ಯೋಧರ ವಿರುದ್ಧ ಚಾರ್ಜ್ ಶೀಟ್!

ಮೇಜರ್ ಶ್ರೇಣಿಯ ಅಧಿಕಾರಿಯೂ ಸೇರಿದಂತೆ 21 ಪ್ಯಾರಾ ವಿಶೇಷ ಪಡೆಯ ಕನಿಷ್ಠ 30 ಯೋಧರ ವಿರುದ್ಧ ನಾಗಲ್ಯಾಂಡ್ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ. 
ನಾಗಾಲ್ಯಾಂಡ್ ನಾಗರೀಕರ ಹತ್ಯೆ: 21 ಪ್ಯಾರಾ ವಿಶೇಷ ಪಡೆಯ 30 ಯೋಧರ ವಿರುದ್ಧ ಚಾರ್ಜ್ ಶೀಟ್!
Updated on

ದಿಮಾಪುರ್: ಮೇಜರ್ ಶ್ರೇಣಿಯ ಅಧಿಕಾರಿಯೂ ಸೇರಿದಂತೆ 21 ಪ್ಯಾರಾ ವಿಶೇಷ ಪಡೆಯ ಕನಿಷ್ಠ 30 ಯೋಧರ ವಿರುದ್ಧ ನಾಗಲ್ಯಾಂಡ್ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ. 

2021ರ ಡಿಸೆಂಬರ್ 4ರಂದು ಮೋನ್ ಜಿಲ್ಲೆಯ ಓಟಿಂಗ್-ತಿರು ಪ್ರದೇಶದಲ್ಲಿ ನಡೆದ ವಿಫಲ ಸೇನಾ ಕಾರ್ಯಾಚರಣೆಯಲ್ಲಿ ಕನಿಷ್ಠ 13 ಮಂದಿ ನಾಗರಿಕರು ಮೃತಪಟ್ಟಿದ್ದರು. ವಿಶೇಷ ಪಡೆಗಳ ಕಾರ್ಯಾಚರಣೆ ತಂಡವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಮತ್ತು ಎಂಗೇಜ್‌ಮೆಂಟ್ ನಿಯಮಗಳನ್ನು ಅನುಸರಿಸಿಲ್ಲ. ಅಲ್ಲದೆ ವಿವೇಚನಾರಹಿತ ಮತ್ತು ಅಸಮಂಜಸವಾದ ಗುಂಡಿನ ದಾಳಿ ನಡೆಸಿದ್ದು ಸ್ಥಳದಲ್ಲೇ ಆರು ಮಂದಿ ನಾಗರಿಕರು ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಗಾಯವಾಗಿತ್ತು ಎಂದು ಚಾರ್ಜ್ ಶೀಟ್‌ ನಲ್ಲಿ ದಾಖಲಿಸಲಾಗಿದೆ.

ಚುಮೌಕೆಡಿಮಾ ಪೊಲೀಸ್ ಸಂಕೀರ್ಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಗಾಲ್ಯಾಂಡ್ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಟಿ ಜಾನ್ ಲಾಂಗ್‌ಕುಮರ್, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ 13 ನಾಗರಿಕರು ಸಾವನ್ನಪ್ಪಿದ ಓಟಿಂಗ್ ಘಟನೆಗೆ ಸಂಬಂಧಿಸಿದ ಟಿಜಿತ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ. 

ಡಿಸೆಂಬರ್ 5ರಂದು ರಾಜ್ಯ ಅಪರಾಧ ಪೊಲೀಸರು ಭಾರತೀಯ ಸೇನೆಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 304 ಮತ್ತು 34ರ ಅಡಿಯಲ್ಲಿ ಪ್ರಕರಣವನ್ನು ಮರು-ನೋಂದಾಯಿಸಿ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ(SIT) ಹಸ್ತಾಂತರಿಸಲಾಯಿತು.

ಈ ಪ್ರಕರಣದಲ್ಲಿ ಎಸ್‌ಐಟಿ ವೃತ್ತಿಪರ ಮತ್ತು ಸಂಪೂರ್ಣ ತನಿಖೆ ನಡೆಸಲಾಗಿದೆ ಎಂದು ಅವರು ಹೇಳಿದರು. ವಿವಿಧ ಅಧಿಕಾರಿಗಳು ಮತ್ತು ಮೂಲಗಳಿಂದ ಸಂಬಂಧಿಸಿದ ಪ್ರಮುಖ ದಾಖಲೆಗಳು, ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್‌ಎಸ್‌ಎಲ್) ಗುವಾಹಟಿ, ಹೈದರಾಬಾದ್ ಮತ್ತು ಚಂಡೀಗಢ ಮತ್ತು ತಾಂತ್ರಿಕ ಅಭಿಪ್ರಾಯಗಳು ಸೇರಿದಂತೆ ವಿವಿಧ ಪುರಾವೆಗಳನ್ನು ಸೇರಿಸಿದರು. ತನಿಖೆಯ ಸಂದರ್ಭದಲ್ಲಿ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ ಅನ್ನು 2022ರ ಮೇ 30ರಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ಸಲ್ಲಿಸಲಾಗಿದೆ ಎಂದು ಡಿಜಿಪಿ ಹೇಳಿದರು. ಮೇಜರ್, ಇಬ್ಬರು ಸುಬೇದಾರ್, ಎಂಟು ಹವಾಲ್ದಾರರು, ನಾಲ್ವರು ನಾಯ್ಕ್, ಆರು ಲ್ಯಾನ್ಸ್ ನಾಯ್ಕ್ ಮತ್ತು ಒಂಬತ್ತು ಪ್ಯಾರಾಟ್ರೂಪರ್‌ಗಳು ಸೇರಿದಂತೆ 21 ಪ್ಯಾರಾ ವಿಶೇಷ ಪಡೆಯ ಕಾರ್ಯಾಚರಣೆ ತಂಡದ 30 ಯೋಧರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಅದರಂತೆ, ಕಾನೂನು ಕ್ರಮಕ್ಕೆ ಅನುಮತಿ ಕೋರಿ ಸಿಐಡಿ ವರದಿಯನ್ನು ಈ ವರ್ಷದ ಏಪ್ರಿಲ್ ಮೊದಲ ವಾರದಲ್ಲಿ ಮಿಲಿಟರಿ ವ್ಯವಹಾರಗಳ ಇಲಾಖೆಗೆ ರವಾನಿಸಲಾಗಿದ್ದು ಮೇ ತಿಂಗಳಲ್ಲಿ ಜ್ಞಾಪನೆ ಪತ್ರ ಬಂದಿದೆ. ಪ್ರಾಸಿಕ್ಯೂಷನ್ ಮಂಜೂರಾತಿಗೆ ಕಾಯಲಾಗುತ್ತಿದೆ ಎಂದು ಡಿಜಿಪಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com