ಉದಯಪುರ: ಟೈಲರ್‌ನ ಅಮಾನುಷ ಹತ್ಯೆ ಖಂಡಿಸಿ ಬೃಹತ್ ರ್ಯಾಲಿ; ಸಾವಿರಾರು ಮಂದಿ ಭಾಗಿ
ಉದಯಪುರ: ರಾಜಸ್ತಾನದ ಉದಯಪುರದಲ್ಲಿ ಹಾಡುಹಗಲೇ ಟೈಲರ್ ಕನ್ಹಯ್ಯಾ ಲಾಲ್ ಭೀಕರ ಹತ್ಯೆಯನ್ನು ವಿರೋಧಿಸಿ ಗುರುವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಹಿಂದೂ ಸಂಘಟನೆಗಳಿಂದ ‘ಸರ್ವ ಹಿಂದೂ ಸಮಾಜ’ ರ್ಯಾಲಿಗೆ ಕರೆ ನೀಡಲಾಗಿದ್ದು, ಜಿಲ್ಲಾಡಳಿತದ ಅನುಮತಿಯೊಂದಿಗೆ ಟೌನ್ ಹಾಲ್ ನಿಂದ ಕಲೆಕ್ಟರೇಟ್ ವರೆಗೆ ಶಾಂತಿಯುತವಾಗಿ ನಡೆಯಿತು.
ರ್ಯಾಲಿಗೆ ಅನುಮತಿ ನೀಡಲಾಗಿದ್ದು, ಮೆರವಣಿಗೆ ಸಾಗುವ ಮಾರ್ಗದಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಹೆಚ್ಚುವರಿ ಡಿಜಿ ದಿನೇಶ್ ಎಂ.ಎನ್ ತಿಳಿಸಿದ್ದಾರೆ. ಇದನ್ನು ಮೌನ ಮೆರವಣಿಗೆ ಎಂದು ಕರೆಯಲಾಗಿದ್ದರೂ, ಕೆಲವು ಸದಸ್ಯರು ಹಿಂದೂ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಎತ್ತಿದರು. ಕೆಲವರು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಬಂದಿದ್ದು ಕಂಡುಬಂತು.
ಕಳೆದ ಮಂಗಳವಾರ ಮಧ್ಯಾಹ್ನ ಟೈಲರ್ ಕನ್ಹಯ್ಯಾ ಲಾಲ್ ಬಳಿ ಬಟ್ಟೆ ಹೊಲಿಯಲು ಅಳತೆ ತೆಗೆಯುವ ನೆಪದಲ್ಲಿ ಬಂದು ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿ ಚಾಕುವಿನಿಂದ ಶಿರಚ್ಚೇದ ಮಾಡಿದ ಕ್ರೂರ ದಾಳಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಉದಯಪುರ ಹತ್ಯೆಯನ್ನು ಭಯೋತ್ಪಾದಕ ಘಟನೆ ಎಂದು ಬಣ್ಣಿಸಿದೆ. ಕೇಂದ್ರ ಗೃಹ ಸಚಿವಾಲಯವು ಎನ್‌ಐಎಗೆ ತನಿಖೆ ವರ್ಗಾಯಿಸಿದೆ. ಈ ಘಟನೆ ಹಿಂದೆ ಯಾವುದೇ ಸಂಘಟನೆ ಅಥವಾ ಅಂತಾರಾಷ್ಟ್ರೀಯ ಸಂಘಟನೆಗಳ ಪಾತ್ರವಿದೆಯೇ ಎಂದು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಎಂದು ಹೇಳಿದೆ.
ಕನ್ಹಯ್ಯನ ಶವಪರೀಕ್ಷೆಯ ವರದಿಯಲ್ಲಿ ಟೈಲರ್ ದೇಹದ ಮೇಲೆ ಹರಿತವಾದ ಆಯುಧದಿಂದ ಉಂಟಾದ 26 ಗಾಯಗಳ ಗುರುತುಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳದಲ್ಲಿ ಬಿಗುವಿನ ವಾತಾವರಣ: ಸ್ಥಳದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಮಹಾನಿರ್ದೇಶಕರು, ಒಬ್ಬರು ಉಪ ಐಜಿ ಹಾಗೂ ಇತರ ಹಿರಿಯ ಅಧಿಕಾರಿಗಳು ನಗರದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.