ಬೆಂಗಳೂರು ಮೂಲಕ ಮೈಸೂರು ತಲುಪಿದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು: ಈ ರೈಲಿನ ವಿಶೇಷತೆಗಳೇನು?

ಚೆನ್ನೈ - ಬೆಂಗಳೂರು ಹಾಗೂ ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat express train) ಪ್ರಯಾಣಿಕರ ರೈಲು ಇಂದು ಸೋಮವಾರ ಮುಂಜಾನೆ 5.50ರ ಸಮಯದಲ್ಲಿ ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು.
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು
Updated on

ಬೆಂಗಳೂರು: ಚೆನ್ನೈ - ಬೆಂಗಳೂರು ಹಾಗೂ ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat express train) ಪ್ರಯಾಣಿಕರ ರೈಲು ಇಂದು ಸೋಮವಾರ ಮುಂಜಾನೆ 5.50ರ ಸಮಯದಲ್ಲಿ ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು.

ಈ ರೈಲು ಚೆನ್ನೈನ ಪೆರಂಬೂರಿನಲ್ಲಿರುವ ಐಸಿಎಫ್‌ನಲ್ಲಿ(ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ) ಸಿದ್ಧವಾಗಿದೆ. ರೈಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಅಗತ್ಯ ಮಾರ್ಪಾಡು ಮಾಡಲು ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಇಂದು ಬೆಳಗ್ಗೆ 10.20ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಆಗಮಿಸಿದೆ. 10.30ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ ಮೈಸೂರು ತಲುಪಿದೆ. ಬಳಿಕ ಮೈಸೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 2.55ಕ್ಕೆ ಆಗಮಿಸಲಿದ್ದು, 3.10ಕ್ಕೆ ಚೆನ್ನೈನತ್ತ ಹೊರಡಲಿದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ವಿಶೇಷತೆಗಳೇನು?
ದೇಶದ ಅತ್ಯಂತ ವೇಗದ ರೈಲು ಇದಾಗಿದ್ದು, ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ ಶರವೇಗದಲ್ಲಿ ಓಡಲಿದೆ. ಆದರೆ ಮೈಸೂರು-ಚೆನ್ನೈ ಮಾರ್ಗದಲ್ಲಿ ದೇಶದ ಇತರೆಡೆ ಸಂಚರಿಸುತ್ತಿರುವಷ್ಟು ವೇಗದಲ್ಲಿ ಈ ರೈಲು ಓಡುವುದಿಲ್ಲ ಎಂದು ಹೇಳಲಾಗಿದೆ.
ಸ್ವದೇಶಿ ನಿರ್ಮಿತ ಅತಿ ವೇಗದ ರೈಲು ನ.11 ರಿಂದ ಮೈಸೂರು- ಬೆಂಗಳೂರು- ಚೆನ್ನೈ ನಡುವೆ ತನ್ನ ಮೊದಲ ಸಂಚಾರ ನಡೆಸಲಿದೆ. ದಕ್ಷಿಣ ಭಾರತದ ಮೊದಲ, ದೇಶದ 5ನೇ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ದೇಶದ ಅತಿ ವೇಗದ ರೈಲು. ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದದ ಸಾಮರ್ಥ್ಯ, ಐಶಾರಾಮಿ ವ್ಯವಸ್ಥೆ ಇದ್ದು, ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳನ್ನು ಹೊಂದಿದೆ. ವಂದೇ ಭಾರತ್‌ ರೈಲಿನಲ್ಲಿ ಆನ್‌ಬೋರ್ಡ್‌ ಉಪಾಹಾರದ ವ್ಯವಸ್ಥೆ ಇದೆ, ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್‌ ಪಾಯಿಂಟ್‌, ರೀಡಿಂಗ್‌ ಲೈಟ್‌ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಸಿಸಿಟೀವಿ, ಬಯೋ ಶೌಚಾಲಯಗಳನ್ನು ಹೊಂದಿದೆ. 16 ಬೋಗಿಗಳನ್ನು ಹೊಂದಿದ್ದು, 384 ಮೀ. ಉದ್ದವಿದೆ. ಪ್ರತ್ಯೇಕ ಎಂಜಿನ್‌ ಇಲ್ಲ.

ರೈಲಿನ ವೇಗ ಅಧಿಕವಾಗಿರುವುದರಿಂದ ಪ್ರಯಾಣದ ಸಮಯ ಶೇಕಡಾ 25ರಿಂದ 45ರವರೆಗೆ ಕಡಿಮೆ ಸಾಕಾಗುತ್ತದೆ. ಉದಾಹರಣೆಗೆ ದೆಹಲಿ ಮತ್ತು ವಾರಣಾಸಿ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ 8 ಗಂಟೆ ಪ್ರಯಾಣ ಅವಧಿ ಸಾಕಾಗುತ್ತದೆ. ಶೇಕಡಾ 40ರಿಂದ 50ರಷ್ಟು ವೇಗವಾಗಿ ಸಂಚಾರ ಮಾಡುತ್ತದೆ. ಪ್ರತಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ 1,128 ಪ್ರಯಾಣಿಕರ ಸೀಟಿನ ಸಾಮರ್ಥ್ಯವನ್ನು ಹೊಂದಿದೆ. 

ರೈಲಿನ ದರ: ಮೈಸೂರು, ಚೆನ್ನೈ ನಡುವಿನ ಪ್ರಯಾಣದರ ಎಕಾನಮಿ ಕ್ಲಾಸ್‌ 921 ರು, ಎಕ್ಸಿಕ್ಯುಟಿವ್‌ ಕ್ಲಾಸ್‌ 1880 ರು.
ಮೈಸೂರು, ಬೆಂಗಳೂರು ನಡುವಿನ ಪ್ರಯಾಣದರ ಎಕಾನಮಿ ಕ್ಲಾಸ್‌ 368 ರು, ಎಕ್ಸಿಕ್ಯುಟಿವ್‌ ಕ್ಲಾಸ್‌ 768 ರು.

ರಾಜ್ಯದ ಮೊದಲ, ದೇಶದ 5ನೇ ವಂದೇ ಭಾರತ್‌ ರೈಲು
2019ರಲ್ಲಿ ಮೊದಲ ಬಾರಿಗೆ ಪ್ರಯಾಣ ಆರಂಭಿಸಿದ ವಂದೇ ಭಾರತ್‌ ಪ್ರಸ್ತುತ ನಾಲ್ಕು ರೈಲುಗಳ ಸೇವೆಯನ್ನು ನೀಡುತ್ತಿದೆ. ನ.11ರಿಂದು ಮೈಸೂರು ಮತ್ತು ಚೆನ್ನೈ ನಡುವೆ ಆರಂಭವಾಗುತ್ತಿರುವ ರೈಲು ಐದನೆಯದ್ದಾಗಿದೆ. ಮೈಸೂರು ಮತ್ತು ಚೆನ್ನೈ ನಡುವಿನ 504 ಕಿ.ಮೀ. ದೂರವನ್ನು ಈ ರೈಲು 7 ತಾಸುಗಳಲ್ಲಿ ಕ್ರಮಿಸಲಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಗರಿಷ್ಠ ವೇಗ 160 ಕಿ.ಮೀ. ಇದೆಯಾದರೂ, ಮೈಸೂರು ಮತ್ತು ಚೆನ್ನೈ ನಡುವೆ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಈಗಾಗಲೇ ದೆಹಲಿ-ವಾರಾಣಸಿ, ದೆಹಲಿ-ಶ್ರೀಮಾತಾ ವೈಷ್ಣೋದೇವಿ, ಮುಂಬೈ-ಗಾಂಧಿನಗರ, ದೆಹಲಿ-ಅಂಬ್‌ ಅಂದೌರಾ ನಡುವೆ ವಂದೇ ಭಾರತ್‌ ರೈಲುಗಳು ಚಲಿಸುತ್ತಿವೆ.

ದೇಶದ ಅತಿ ವೇಗದ ರೈಲು ವಿಮಾನದ ರೀತಿಯ ವಿನ್ಯಾಸ
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ದೇಶದಲ್ಲೇ ಅತಿ ವೇಗವಾಗಿ ಚಲಿಸುವ ರೈಲಾಗಿದೆ. ಈ ರೈಲು ಪ್ರತಿಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಈ ರೈಲು 0 ಇಂದ 100 ಕಿ.ಮೀ. ವೇಗಕ್ಕೆ ಕೇವಲ 52 ಸೆಕೆಂಡ್‌ಗಳಲ್ಲಿ ತಲುಪಬಲ್ಲದು. ವಿಶ್ವದ ಅತ್ಯಂತ ವೇಗದ ರೈಲುಗಳ ಪೈಕಿ ಒಂದು ಎನ್ನಿಸಿಕೊಂಡಿರುವ ಜಪಾನ್‌ನ ಬುಲೆಟ್‌ ರೈಲು ಈ ವೇಗವನ್ನು ತಲುಪಲು 54.6 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ. ಇಡೀ ರೈಲನ್ನು ಏರೋಡೈನಾಮಿಕ್ಸ್‌ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಗಾಳಿಯ ತಡೆಯನ್ನು ಬೇಧಿಸಿ ರೈಲು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ.

2019ರಲ್ಲಿ ಮೊದಲ ಪ್ರಯಾಣ ಮಾಡಿದ ವಂದೇ ಭಾರತ್‌

ದೇಶದಲ್ಲಿರುವ ರೈಲು ಸೇವೆಯ ವೇಗವನ್ನು ವೃದ್ಧಿ ಮಾಡುವ ಉದ್ದೇಶದಿಂದ ಸರ್ಕಾರ ವಂದೇ ಭಾರತ್‌ ರೈಲುಗಳ ಉತ್ಪಾದನೆಗೆ ಅನುಮತಿಯನ್ನು ನೀಡಿತ್ತು. ವೇಗ ರೈಲು ಸೇವೆಗಾಗಿಯೇ ಆರಂಭಿಸಿದ ಗತಿಮಾನ್‌ ಎಕ್ಸ್‌ಪ್ರೆಸ್‌ನ ಸರಾಸರಿ ವೇಗ ಗಂಟೆಗೆ 99 ಕಿ.ಮೀ. ಇತ್ತು. ಇದನ್ನು ಮತ್ತಷ್ಟುಹೆಚ್ಚು ಮಾಡಿದ್ದು ವಂದೇ ಭಾರತ್‌ ಎಕ್ಸ್‌ಪ್ರೆಸ್‌. 2018ರಲ್ಲಿ ನಿರ್ಮಾಣ ಕಾರ‍್ಯ ಆರಂಭಗೊಂಡ ಬಳಿಕ ಮೊದಲ ಬಾರಿಗೆ 2019ರ ಫೆ.15ರಂದು ಮೊದಲ ರೈಲಿಗೆ ಚಾಲನೆ ನೀಡಲಾಯಿತು. ಈ ರೈಲಿನ ಶೇ.85ರಷ್ಟನ್ನು ದೇಶೀಯವಾಗಿ ನಿರ್ಮಾಣ ಮಾಡಲಾಗಿದೆ. ಈ ರೈಲು ನವದೆಹಲಿಯಿಂದ ವಾರಾಣಸಿ ನಡುವಿನ 750 ಕಿ.ಮೀ.ಗಳನ್ನು ಯಶಸ್ವಿಯಾಗಿ ಕ್ರಮಿಸಿತು. ರೈಲು ಪ್ರಯಾಣ ಯಶಸ್ವಿಯಾದ ಬಳಿಕ ಈ ರೈಲನ್ನು ಮತ್ತಷ್ಟುಉನ್ನತ ದರ್ಜೆಗೇರಿಸಿ ಮತ್ತಷ್ಟು ಮಾರ್ಗಗಳಿಗೂ ವಿಸ್ತರಿಸಲಾಯಿತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 400 ಹೊಸ ತಲೆಮಾರಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದಿಸಿ ಅಭಿವೃದ್ಧಿಪಡಿಸುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com