ಏನಿದು ಜಿ20 ಲೋಗೋ ವಿವಾದ?:ನಮ್ಮ ಸಂಸ್ಕೃತಿಯನ್ನು ಮರೆತುಬಿಡಬೇಕೇ? ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದೇಕೆ?

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿ20 ಶೃಂಗಸಭೆಯ ಲೋಗೋ ವಿವಾದದ ಬಗ್ಗೆ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಸ್ಕೃತಿಯನ್ನು ನಾವು ಮರೆತುಬಿಡಬೇಕೇ? ಎಂದು ಗುಡುಗಿದ್ದಾರೆ. 
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಹರ್ಯಾಣ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿ20 ಶೃಂಗಸಭೆಯ ಲೋಗೋ ವಿವಾದದ ಬಗ್ಗೆ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಸ್ಕೃತಿಯನ್ನು ನಾವು ಮರೆತುಬಿಡಬೇಕೇ? ಎಂದು ಗುಡುಗಿದ್ದಾರೆ. 

ಶೃಂಗಸಭೆಯ ಲೋಗೋದಲ್ಲಿ ನಿರ್ದಿಷ್ಟ ಪಕ್ಷದ ಚಿಹ್ನೆಯನ್ನು ಹೋಲುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಸಂಸ್ಕೃತಿಯನ್ನು ಮರೆತುಬಿಡಬೇಕೇ? ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದು, ಜಿ20 ಶೃಂಗಸಭೆಯ ಲೋಗೋ ಬಗ್ಗೆ ಚರ್ಚೆಗಳಾಗುತ್ತಿವೆ. ಪ್ರಧಾನಿ ಮೋದಿ ಲೋಗೋ ಮೇಲೆ ತಮ್ಮ ಪಕ್ಷದ ಚಿಹ್ನೆಯನ್ನು ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ. 1857 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಒಂದು ಕೈಲಿ ರೋಟಿ (ಚಪಾತಿ) ಹಿಡಿದಿದ್ದರೆಮತ್ತೊಂದು ಕೈಲಿ ಕಮಲ ಹಿಡಿದಿದ್ದರು ಎಂಬುದು ಈ ರೀತಿ ಆರೋಪ ಮಾಡುತ್ತಿರುವವರಿಗೆ ಮರೆತುಹೋಗಿದೆ? ಎಂದು ರಕ್ಷಣಾ ಸಚಿವರು ಪ್ರಶ್ನಿಸಿದ್ದಾರೆ.
 
ಕಮಲ ನಮ್ಮ ರಾಷ್ಟ್ರೀಯ ಹೂವು ಎಂಬ ವಾಸ್ತವದ ಹೊರತಾಗಿ ಅದು ನಮ್ಮ ಪಕ್ಷದ ಚಿಹ್ನೆಯಾಗಿದೆ ಎಂಬ ಒಂದೇ ಕಾರಣಕ್ಕೆ ನಮ್ಮ ಸಂಸ್ಕೃತಿಯನ್ನು ಮರೆಯಬೇಕೆ? ಎಂದು ರಾಜನಾಥ್ ಸಿಂಗ್ ಕೇಳಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪ್ರಧಾನಿ ಮೋದಿ ಮಂಗಳವಾರದಂದು ವಿಡಿಯೋ ಕಾಫರೆನ್ಸ್ ಮೂಲಕ ಲೋಗೋ ಬಿಡುಗಡೆ ಮಾಡಿದ್ದರು. 

ಸರ್ಕಾರ ಲೋಗೋ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಾರತೀಯ ರಾಷ್ಟ್ರೀಯ ಧ್ವಜದಿಂದ ರೋಮಾಂಚಕ ಬಣ್ಣಗಳಿಂದ ಸ್ಫೂರ್ತಿ ಪಡೆದು ಲೋಗೋ ಸಿದ್ಧಪಡಿಸಲಾಗಿದೆ. ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದೊಂದಿಗೆ ಭೂಮಿಯನ್ನು ಜೋಡಿಸುವ ಸಂಕೇತವನ್ನು ಈ ಲೋಗೋ ಹೊಂದಿದೆ ಎಂದು ಸರ್ಕಾರ ಹೇಳಿದೆ.
 
ಲೋಗೋ ಬಗ್ಗೆ ಆಕ್ಷೇಪವೆತ್ತಿರುವ ಕಾಂಗ್ರೆಸ್ ನ ನಾಯಕ ಹಾಗೂ ವಕ್ತಾರ ಜೈರಾಮ್ ರಮೇಶ್, "ಬಿಜೆಪಿ ಹಾಗೂ ಪ್ರಧಾನಿಗಳು ತಮ್ಮನ್ನು ನಾಚಿಕೆಗೇಡಿನ ರೀತಿಯಲ್ಲಿ ತಮ್ಮನ್ನು ಪ್ರಚಾರ ಮಾಡಿಕೊಳ್ಳುವ ಯಾವ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ" ಎಂದು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com