ರಾಮ್‌ಪುರ: 1977 ರ ನಂತರ ಇದೇ ಮೊದಲ ಬಾರಿಗೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅಥವಾ ಅವರ ಕುಟುಂಬ ಸದಸ್ಯರು ರಾಮ್‌ಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಜಂ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ನಂತರ ತೆರವಾದ ಸ್ಥಾನಕ್ಕೆ ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದೆ.
ಸಮಾಜವಾದಿ ಪಕ್ಷ ಈ ಬಾರಿ, ಅಜಂ ಖಾನ್ ಅವರ ಪತ್ನಿ ತಜೀನ್ ಫಾತ್ಮಾ ಅಥವಾ ಅವರ ಸೊಸೆಯನ್ನು ಕಣಕ್ಕಿಳಿಸಿಲ್ಲ. ಬದಲಾಗಿ ಅಜಂ ಖಾನ್ ಅವರ ನಿಷ್ಠಾವಂತ ಅಸೀಮ್ ರಾಜಾಗೆ ಟಿಕೆಟ್ ನೀಡಲಾಗಿದೆ. ಅಜಂ ಖಾನ್ ಅಥವಾ ಅವರ ಕುಟುಂಬದ ಸದಸ್ಯರು 1977 ರಿಂದ ನಿರಂತರವಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಖಾನ್ ಅವರು 1977 ರಿಂದ 2022 ರವರೆಗೆ 12 ಬಾರಿ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ. ಅದರಲ್ಲಿ ಅವರು ಹತ್ತು ಬಾರಿ ಗೆದ್ದಿದ್ದಾರೆ ಮತ್ತು ಎರಡು ಬಾರಿ ಸೋತಿದ್ದಾರೆ.
2019ರಲ್ಲಿ ಅಜಂ ಖಾನ್ ಸಂಸತ್ ಸದಸ್ಯರಾದ ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ತಜೀನ್ ಫಾತ್ಮಾ ಸ್ಪರ್ಧಿಸಿ ಗೆದ್ದಿದ್ದರು.
Advertisement