ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ ತಲೋಜಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆ ಕಾರಣಗಳ ಹಿನ್ನೆಲೆಯಲ್ಲಿ ಗೃಹಬಂಧನದಲ್ಲಿರಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
2020ರಿಂದ ನವ್ಲಾಖಾ ಜೈಲಿನಲ್ಲಿದ್ದರು. ನವ್ಲಾಖಾ ಅವರು ಉದ್ದೇಶಪೂರ್ವಕವಾಗಿ ತಮ್ಮ ಆರೋಗ್ಯದ ಬಗ್ಗೆ ನ್ಯಾಯಾಲಯವನ್ನು ದಾರಿ ತಪ್ಪಿಸಿದ್ದಾರೆ ಎಂಬ ತನಿಖಾ ಸಂಸ್ಥೆಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಎನ್‌ಐಎ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ನವ್ಲಾಖಾರನ್ನು ಮುಂದಿನ 24 ಗಂಟೆಗಳೊಳಗೆ ಗೃಹಬಂಧನದಲ್ಲಿ ಇರಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ, ನವ್ಲಾಖಾ ಅವರನ್ನು ನವಿ ಮುಂಬೈನಲ್ಲಿ ಬಂಧನಕ್ಕಾಗಿ ಆಯ್ಕೆ ಮಾಡಿದ ಮನೆಗೆ ಕರೆದೊಯ್ಯಲಾಗಿದ್ದು ಒಂದು ತಿಂಗಳ ಕಾಲ ಗೃಹ ಬಂಧನದಲ್ಲಿರಲ್ಲಿದ್ದಾರೆ.
ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್ ಗೃಹಬಂಧನಕ್ಕೆ ಆದೇಶ ನೀಡಿತ್ತು!
ಗೌತಮ್ ನವ್ಲಾಖಾ ಅವರನ್ನು 48 ಗಂಟೆಗಳ ಒಳಗೆ ಗೃಹಬಂಧನದಲ್ಲಿರಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವಾರವಷ್ಟೇ ಆದೇಶ ನೀಡಿತ್ತು. ಎನ್ಐಎ ಮತ್ತು ಇಡಿ ಇದನ್ನು ವಿರೋಧಿಸಿದ್ದರೂ. ಶುಕ್ರವಾರದ ವಿಚಾರಣೆಯಲ್ಲಿ ನ್ಯಾಯಾಲಯವು ತನಿಖಾ ಸಂಸ್ಥೆಗಳಿಗೆ ಛೀಮಾರಿ ಹಾಕಿದೆ. ನವ್ಲಾಖಾ ಅವರು ಬಂಧನಕ್ಕೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಕಮ್ಯುನಿಸ್ಟ್ ಪಕ್ಷದ ಕಚೇರಿ ಎಂಬುದು ಎನ್ಐಎ ವಾದವಾಗಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಇದರಲ್ಲಿ ತಪ್ಪೇನು ಎಂದು ಹೇಳಿತ್ತು. ಕಮ್ಯುನಿಸ್ಟ್ ಪಕ್ಷ ದೇಶದ ಮಾನ್ಯತೆ ಪಡೆದ ಪಕ್ಷ ಎಂದು ಹೇಳಿತ್ತು.
Advertisement