ಬಿಜೆಪಿ ಸಂಪರ್ಕದಲ್ಲಿ ನಿತೀಶ್, ಮತ್ತೆ ಕಮಲ ಹಿಡಿದರೂ ಆಶ್ಚರ್ಯವಿಲ್ಲ: ಪ್ರಶಾಂತ್ ಕಿಶೋರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಬುಧವಾರ ಹೇಳಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಮತ್ತೆ ಅವರು ಕಮಲ ಹಿಡಿದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.
ಪ್ರಶಾಂತ್ ಕಿಶೋರ್, ಸಿಎಂ ನಿತೀಶ್ ಕುಮಾರ್
ಪ್ರಶಾಂತ್ ಕಿಶೋರ್, ಸಿಎಂ ನಿತೀಶ್ ಕುಮಾರ್

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಬುಧವಾರ ಹೇಳಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಮತ್ತೆ ಅವರು ಕಮಲ ಹಿಡಿದರೂ ಆಶ್ಚರ್ಯವಿಲ್ಲ ಎಂದಿದ್ದಾರೆ. ಆದರೆ, ಈ ಸಲಹೆಯನ್ನು ಅಲ್ಲಗಳೆದಿರುವ ಜೆಡಿಯು ಗೊಂದಲ ಸೃಷ್ಟಿಸುವ, ಹಾದಿ ತಪ್ಪಿಸುವ ಹೇಳಿಕೆ ಎಂದು ಹೇಳಿದೆ. 

ಬಿಹಾರದಲ್ಲಿ ಪಾದಯಾತ್ರೆ ನಡೆಯುತ್ತಿರುವ ಪ್ರಶಾಂತ್ ಕಿಶೋರ್, ಜೆಡಿಯು ಸಂಸದ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರ ಮೂಲಕ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದರು. ಈ ಕುರಿತು ಹರಿವಂಶ್ ಅವರನ್ನು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಆದರೆ, ನಿತೀಶ್ ಕುಮಾರ್ ಮತ್ತೆ ಬಿಜೆಪಿಯೊಂದಿಗೆ ಕೈ ಜೋಡಿಸಿಲ್ಲ ಎಂದು ಜೆಡಿಯು ಪ್ರತಿಪಾದಿಸಿದೆ. 

ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದ ಮೈತ್ರಿ ರಚಿಸುವಲ್ಲಿ ಸಕ್ರೀಯರಾಗಿದ್ದಾರೆ ಎಂಬುದಾಗಿ ಜನರು ಆಲೋಚಿಸುತ್ತಿದ್ದಾರೆ  ಆದರೆ, ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೇ ಕಾರಣದಿಂದ ಹರಿವಂಶ್ ಅವರು ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳುತ್ತಿಲ್ಲ, ಸಂದರ್ಭ ಬಂದಾಗ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಿ ಅವರೊಟ್ಟಿಗೆ ನಿತೀಶ್ ಕುಮಾರ್ ಕೆಲಸ ಮಾಡಲಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಆದರೆ, ಪ್ರಶಾಂತ್ ಕಿಶೋರ್ ಹೇಳಿಕೆಯನ್ನು ತಳ್ಳಿ ಹಾಕಿರುವ ಜೆಡಿಯು ವಕ್ತಾರ ಕೆ. ಸಿ ತ್ಯಾಗಿ, ನಿತೀಶ್ ಕುಮಾರ್ 50 ವರ್ಷದಿಂದ ರಾಜಕೀಯದಲ್ಲಿದ್ದಾರೆ. ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಬಂದು ಕೇವಲ ಆರು ತಿಂಗಳಾಗಿದೆ. ಗೊಂದಲ ಸೃಷ್ಟಿಸಲು, ಹಾದಿ ತಪ್ಪಿಸಲು ಅವರು ಇಂತಹ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com