ನಮೀಬಿಯಾದಿಂದ ಚೀತಾಗಳನ್ನು ಕರೆತರುವ ವಿಮಾನ, ಜೈಪುರ ಬದಲಿಗೆ ಗ್ವಾಲಿಯರ್ ನಲ್ಲಿ ಲ್ಯಾಂಡ್
ಗ್ವಾಲಿಯರ್: ನಮೀಬಿಯಾದಿಂದ 8 ಚೀತಾಗಳನ್ನು ಕರೆತರುತ್ತಿರುವ ವಿಶೇಷ ಕಾರ್ಗೋ ವಿಮಾನ ಈ ಹಿಂದೆ ಯೋಜಿಸಿದ್ದಂತೆ ರಾಜಸ್ಥಾನದ ಜೈಪುರದ ಬದಲಿಗೆ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಲ್ಯಾಂಡ್ ಆಗಲಿದೆ. ನಂತರ ಈ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಶನಿವಾರ ಬೆಳಗ್ಗೆ ಸುಮಾರು5 ರಿಂದ 6 ಗಂಟೆಯೊಳಗೆ ಗ್ವಾಲಿಯರ್ ನ ಮಹಾರಾಜಪುರ ವಾಯುನೆಲೆಯಲ್ಲಿ ವಿಮಾನ ಬಂದಿಳಿಯಲಿದೆ. ನಂತರ ಚೀತಾಗಳನ್ನು ಹೆಲಿಕಾಪ್ಟರ್ ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ಯಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಉದ್ಯಾನ ಗ್ವಾಲಿಯರ್ ನಿಂದ 165 ಕಿಲೋ ಮೀಟರ್ ದೂರದಲ್ಲಿದೆ. ಖಂಡಾಂತರ ಸ್ಥಳಾಂತರ ಯೋಜನೆ ಭಾಗವಾಗಿ ನಮೀಬಿಯಾದಿಂದ ಭಾರತಕ್ಕೆ ತರಲಾಗುತ್ತಿರುವ ಮೂರು ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಪಾರ್ಕ್‌ನ ಕ್ವಾರಂಟೈನ್ ಆವರಣಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಜೆಎಸ್ ಚೌಹಾಣ್, ಚೀತಾಗಳು ಗ್ವಾಲಿಯರ್‌ಗೆ ಆಗಮಿಸಲಿವೆ. ಅಲ್ಲಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆತರಲಾಗುವುದು ಎಂದು ಹೇಳಿದರು.
ಐದು ಹೆಣ್ಣ, ಮೂರು ಗಂಡು ಚಿರತೆಗಳನ್ನು ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಬೋಯಿಂಗ್ 747-400 ವಿಮಾನದ ಮೂಲಕ ಗ್ಲಾಲಿಯರ್ ವಿಮಾನ ನಿಲ್ದಾಣಕ್ಕೆ ಕರೆತರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ