ರಾಹುಲ್ ಗಾಂಧಿಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಪಟ್ಟ ನೀಡುವಂತೆ ಚತ್ತೀಸ್ ಗಢ, ರಾಜಸ್ಥಾನ, ಗುಜರಾತ್, ಪಿಸಿಸಿ ಒತ್ತಡ!
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ರಾಹುಕ್ ಗಾಂಧಿ ಕುಟುಂಬದ ನಿಷ್ಠಾವಂತರು ಹಾಗೂ ರಾಜ್ಯ ಘಟಕಗಳು ರಾಹುಲ್ ಗಾಂಧಿ ಅವರೇ ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷರಾಗಬೇಕು ಎಂದು ಒತ್ತಡ ಹೇರಲು ಮುಂದಾಗಿದ್ದಾರೆ.
ಇದರ ಭಾಗವಾಗಿ ಈಗಾಗಲೇ ಕಾಂಗ್ರೆಸ್ ಸ್ವಂತ ಬಲದ ಆಧಾರದಲ್ಲಿ ಅಧಿಕಾರದಲ್ಲಿರುವ ರಾಜ್ಯಗಳಾದ ರಾಜಸ್ಥಾನ ಹಾಗೂ ಛತ್ತೀಸ್ ಗಢಗಳಲ್ಲಿ ಅಲ್ಲಿನ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಣಯ ಅಂಗೀಕರಿಸಿವೆ.
ಈಗ ಗುಜರಾತ್ ಕಾಂಗ್ರೆಸ್ ಘಟಕವೂ ರಾಹುಲ್ ಗಾಂಧಿ ಅವರೇ ರಾಷ್ಟ್ರಾಧ್ಯಕ್ಷರಾಗಬೇಕು ಎಂದು ನಿರ್ಣಯ ಅಂಗೀಕರಿಸಿ ಬೇಡಿಕೆ ಮುಂದಿಟ್ಟಿದೆ. ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಪಕ್ಷದ ಹೈಕಮಾಂಡ್ ಎದುರು ಈ ಬೇಡಿಕೆಯನ್ನು ಇಡಲಾಗುತ್ತದೆ ಎಂದು ಮುಖ್ಯ ವಕ್ತಾರ ಮನೀಷ್ ದೋಷಿ ಹೇಳಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿ ನಿಯೋಗದಲ್ಲಿರುವವರು ನಿರ್ಣಯಗಳನ್ನು ಅಂಗೀಕರಿಸಿ, ಹೊಸ ಅಧ್ಯಕ್ಷರಿಗೆ ರಾಜ್ಯ ಘಟಕಗಳಿಗೆ ಮುಖ್ಯಸ್ಥರನ್ನು ಹಾಗೂ ಎಐಸಿಸಿ ಪ್ರತಿನಿಧಿಗಳನ್ನು ನೇಮಕ ಮಾಡುವ ಅಧಿಕಾರ ನೀಡುತ್ತಾರೆ ಎಂದು ಪಕ್ಷ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ನಿರ್ಣಯ ಕೈಗೊಳ್ಳಲಾಗುತ್ತಿದೆ.
ಪಕ್ಷದ ಇತರ ರಾಜ್ಯ ಘಟಕಗಳೂ ಸಹ ಇದೇ ರೀತಿಯ ನಿರ್ಣಯ ಮಂಡಿಸುವ ಸಾಧ್ಯತೆ ಇದೆ. ರಾಜಸ್ಥಾನ ಹಾಗೂ ಛತ್ತೀಸ್ ಗಢದ ಮುಖ್ಯಮಂತ್ರಿಗಳಾದ ಗೆಹ್ಲೋಟ್ ಹಾಗೂ ಬಘೇಲ್ ಇಬ್ಬರೂ ಆಂತರಿಕವಾಗಿ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಸಚಿನ್ ಪೈಲಟ್ ಹಾಗೂ ಟಿಎಸ್ ಸಿಂಘ್‌ದೇವ್ ಅವರಿಂದ ಅತೀವ ಒತ್ತಡ ಎದುರಿಸುತ್ತಿದ್ದಾರೆ.
ಆದ ಕಾರಣ ಇಬ್ಬರೂ ನಾಯಕರು ಗಾಂಧಿ ಕುಟುಂಬದ ಮೇಲೆ ನಿಷ್ಠೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ನಿರ್ಣಯ ಅಂಗೀಕರಿಸಿದ್ದಾರೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ಗಾದಿಯ ರೇಸ್ ನಲ್ಲಿ ಗೆಹ್ಲೋಟ್ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬ ವರದಿಗಳನ್ನು ಅಲ್ಲಗಳೆದಿದ್ದ ಗೆಹ್ಲೋಟ್, ಕೊನೆಯ ಕ್ಷಣದವರೆಗೂ ರಾಹುಲ್ ಗಾಂಧಿ ಅವರನ್ನು ರಾಷ್ಟ್ರಾಧ್ಯಕ್ಷರನ್ನಾಗಿಸುವ ಯತ್ನ ಮಾಡಲಾಗುತ್ತದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಜೂನ್ ತಿಂಗಳಲ್ಲಿಯೂ ಸಿಪಿಸಿಸಿ ಇದೇ ಮಾದರಿಯಲ್ಲಿ ನಿರ್ಣಯ ಕೈಗೊಂಡಿತ್ತು.

