ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವತ್ 4 ದಿನ ಇಡಿ ಕಸ್ಟಡಿಗೆ
ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖಾ ಸಂಸ್ಥೆ ಇಡಿ ಎಂಟು ದಿನಗಳ ಕಸ್ಟಡಿಗೆ ಕೇಳಿತ್ತು. ಆದರೆ ಮುಂಬೈ ವಿಶೇಷ ನ್ಯಾಯಾಲಯ 4 ದಿನ ಕಸ್ಟಡಿಗೆ ನೀಡಿತು.
Published: 01st August 2022 05:10 PM | Last Updated: 01st August 2022 05:10 PM | A+A A-

ಸಂಜಯ್ ರಾವತ್
ಮುಂಬೈ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖಾ ಸಂಸ್ಥೆ ಇಡಿ ಎಂಟು ದಿನಗಳ ಕಸ್ಟಡಿಗೆ ಕೇಳಿತ್ತು. ಆದರೆ ಮುಂಬೈ ವಿಶೇಷ ನ್ಯಾಯಾಲಯ 4 ದಿನ ಕಸ್ಟಡಿಗೆ ನೀಡಿತು.
ಇಡಿ ಕಸ್ಟಡಿಯಲ್ಲಿ ಸೇನಾ ನಾಯಕ ಸಂಜಯ್ ರಾವತ್ ಗೆ ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಔಷಧವನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆ ಮತ್ತು ವಿಚಾರಣೆಯ ಸಮಯವನ್ನು ಅಗತ್ಯವಿದ್ದಲ್ಲಿ ಸಹ ಚಿಕಿತ್ಸೆ ಬಗ್ಗೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಇದುವರೆಗಿನ ತನಿಖೆ ಮತ್ತು ಅದರಲ್ಲಿ ಕಂಡುಬಂದಿರುವ ಅಂಶಗಳ ದೃಷ್ಟಿಯಿಂದ ಆರೋಪಿಗಳ ಕಸ್ಟಡಿ ಅಗತ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ.ಆದರೆ 8 ದಿನಗಳ ಕಸ್ಟಡಿಗೆ ನೀಡಲು ನಾನು ಒಪ್ಪುವುದಿಲ್ಲ. ಹೀಗಾಗಿ ಆರೋಪಿಗೆ 4 ದಿನಗಳ ಇಡಿ ಕಸ್ಟಡಿಗೆ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಇಡಿ ಪ್ರತಿನಿಧಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಸಂಜಯ್ ರಾವತ್ ಮತ್ತು ಅವರ ಕುಟುಂಬವು ಅಪರಾಧದ ಆದಾಯದ ನೇರ ಫಲಾನುಭವಿಗಳು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರಾವುತ್ ಅವರಿಗೆ ನಾಲ್ಕು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಒಮ್ಮೆ ಮಾತ್ರ ಏಜೆನ್ಸಿಯ ಮುಂದೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ, ಅವರು ಸಾಕ್ಷ್ಯ ಮತ್ತು ಪ್ರಮುಖ ಸಾಕ್ಷಿಗಳನ್ನು ಹಾಳುಮಾಡಲು ಪ್ರಯತ್ನಿಸಿದರು ಎಂದು ಸಂಸ್ಥೆಯ ವಕೀಲರು ಆರೋಪಿಸಿದ್ದಾರೆ.
ರಾವತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಮುಂಡರಗಿ, ಶಿವಸೇನೆ ನಾಯಕ ಹೃದ್ರೋಗಿಯಾಗಿರುವುದರಿಂದ ತಡರಾತ್ರಿವರೆಗೂ ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿದರು. ಸಾಮಾನ್ಯವಾಗಿ ರಾತ್ರಿ 10 ಗಂಟೆಯವರೆಗೆ ವಿಚಾರಣೆ ನಡೆಸುತ್ತೇವೆ ಎಂದು ತನಿಖಾ ಸಂಸ್ಥೆ ಪ್ರತಿಕ್ರಿಯಿಸಿದೆ. ಅವರು ಹೃದಯ ಸಂಬಂಧಿ ಕಾಯಿಲೆ ಇರುವ ರೋಗಿ. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದೆ. ರಾವತ್ ಅವರ ಬಂಧನವು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.
ಮುಂಬೈನಲ್ಲಿನ ‘ಚಾಲ್’ ಮರುಅಭಿವೃದ್ಧಿಯಲ್ಲಿನ ಆರ್ಥಿಕ ಅಕ್ರಮಗಳು ಮತ್ತು ಅವರ ಪತ್ನಿ ಮತ್ತು ಆಪಾದಿತ ಸಹಚರರನ್ನು ಒಳಗೊಂಡ ಹಣಕಾಸು ಆಸ್ತಿ ವಹಿವಾಟುಗಳಿಗೆ ಸಂಬಂಧಿಸಿದಂತೆ ಇಡಿ ಭಾನುವಾರ ಮಧ್ಯರಾತ್ರಿ ಸಂಜಯ್ ರಾವುತ್ ಅವರನ್ನು ಬಂಧಿಸಿದೆ.
ಜಾರಿ ನಿರ್ದೇಶನಾಲಯದ ಮುಂಬೈ ಕಚೇರಿ, ರಾವತ್ ಅವರನ್ನು ತಪಾಸಣೆಗೆ ಕರೆದೊಯ್ದ ಆಸ್ಪತ್ರೆ ಮತ್ತು ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಭಾರೀ ಪೊಲೀಸ್ ಬಲವನ್ನು ನಿಯೋಜಿಸಿತ್ತು. ಈ ಆವರಣಗಳಲ್ಲಿ ಶಾಂತಿ ಕಾಪಾಡಲು ಸುಮಾರು 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಅವರನ್ನು ನ್ಯಾಯಾಲಯದ ಒಳಗೆ ಕರೆದೊಯ್ಯುವ ಮೊದಲು ಸಂಜಯ್ ರಾವತ್ ಮಾಧ್ಯಮಗಳಿಗೆ ಇದು ನಮ್ಮನ್ನು ಮುಗಿಸಲು ಮಾಡಿರುವ ಸಂಚು ಎಂದು ಈರೋಪಿಸಿದರು.