ನಿತೀಶ್ ಕುಮಾರ್ ಅವಕಾಶವಾದಿ ರಾಜಕಾರಣಿ: ಬಿಜೆಪಿ ಮುಖಂಡರು ವಾಗ್ದಾಳಿ
ನಿತೀಶ್ ಕುಮಾರ್ ಪ್ರಧಾನ ಮಂತ್ರಿ ಮಹತ್ವಾಕಾಂಕ್ಷೆಯಿಂದ ಎನ್ ಡಿಎ ತೊರೆದು ಆರ್ ಜೆಡಿ ನೇತೃತ್ವದ ಪ್ರತಿಪಕ್ಷದೊಂದಿಗೆ ಕೈ ಜೋಡಿಸಿರುವುದಾಗಿ ದೂಷಿಸಿರುವ ಬಿಜೆಪಿ, ಜನಾದೇಶವನ್ನು ಅಪಮಾನಿಸಿ ದ್ರೋಹ ಬಗೆದಿದ್ದಾರೆ ಎಂದು ಮಂಗಳವಾರ ಆರೋಪಿಸಿದೆ.
Published: 09th August 2022 07:51 PM | Last Updated: 09th August 2022 07:56 PM | A+A A-

ನಿತೀಶ್ ಕುಮಾರ್
ನವದೆಹಲಿ: ನಿತೀಶ್ ಕುಮಾರ್ ಪ್ರಧಾನ ಮಂತ್ರಿ ಮಹತ್ವಾಕಾಂಕ್ಷೆಯಿಂದ ಎನ್ ಡಿಎ ತೊರೆದು ಆರ್ ಜೆಡಿ ನೇತೃತ್ವದ ಪ್ರತಿಪಕ್ಷದೊಂದಿಗೆ ಕೈ ಜೋಡಿಸಿರುವುದಾಗಿ ದೂಷಿಸಿರುವ ಬಿಜೆಪಿ, ಜನಾದೇಶವನ್ನು ಅಪಮಾನಿಸಿ ದ್ರೋಹ ಬಗೆದಿದ್ದಾರೆ ಎಂದು ಮಂಗಳವಾರ ಆರೋಪಿಸಿದೆ.
ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪದ ಮೇರೆಗೆ 2017ರಲ್ಲಿ ಆರ್ ಜೆಡಿಯೊಂದಿಗೆ ಸಂಬಂಧ ಕಡಿದುಕೊಂಡಿದ್ದ ನಿತೀಶ್ ಕುಮಾರ್, ಮತ್ತೆ ಆ ಪಕ್ಷದೊಂದಿಗೆ ಮೈತ್ರಿಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ನಿತೀಶ್ ಕುಮಾರ್ ಆಗಾಗ್ಗೆ ಪಕ್ಷ ಬದಲಾಯಿಸುವಲ್ಲಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜೊತೆಗಿನ ಮೈತ್ರಿ ಅಂತ್ಯ: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ!
1999 ರಿಂದಲೂ ನಿತೀಶ್ ಕುಮಾರ್ ಅವರನ್ನು ಬಿಜೆಪಿ ಬೆಂಬಲಿಸುತ್ತಾ ಬಂದಿದೆ. 2013ರಲ್ಲಿ ಅವರು ಪ್ರಧಾನ ಮಂತ್ರಿ ಆಪೇಕ್ಷೆ ಹೊಂದಿದ್ದರು. ಅದಕ್ಕಾಗಿ ಬಿಜೆಪಿಯಿಂದ ಪ್ರತ್ಯೇಕವಾದರು. ಇದೇ ಕಾರಣದಿಂದ ಈಗ ಮತ್ತೆ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿದ್ದಾರೆ ಎಂದು ಹೇಳಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ನಿತೀಶ್ ಕುಮಾರ್ ಆಗಾಗ್ಗೆ ಪಕ್ಷ ಬದಲಾಯಿಸುವಲ್ಲಿ ನಿಸ್ಸಿಮ ಎಂದರು.
ನಿತೀಶ್ ಕುಮಾರ್ ಅವಕಾಶವಾದಿ ರಾಜಕಾರಣಿ ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಆರೋಪಿಸಿದ್ದಾರೆ. ಅಭಿವೃದ್ಧಿಯಲ್ಲಿ ತೊಡಕನ್ನು ಸೃಷ್ಟಿಸುವ ಮೂಲಕ ಬಿಹಾರಕ್ಕೆ ದ್ರೋಹಕ್ಕೆ ಬಗೆಯುತ್ತಿದ್ದಾರೆ. ಬಿಜೆಪಿ ಯಾರಿಗೂ ದ್ರೋಹ ಮಾಡಲ್ಲ, ಯಾರನ್ನು ಅಡಗಿಸುವುದಿಲ್ಲ, ಬಿಹಾರಕ್ಕೆ ದ್ರೋಹ ಮಾಡುತ್ತಿರುವವರು ಅಭಿವೃದ್ಧಿಯಲ್ಲಿ ತೊಡಕನ್ನು ಸೃಷ್ಟಿಸುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ ಹಿಡಿದು ಮೋದಿ ಸರ್ಕಾರದವರೆಗೂ ಬಿಹಾರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮತಗಳನ್ನು ಪಡೆದ ನಿತೀಶ್ ಕುಮಾರ್, ಅಧಿಕಾರ ಅನುಭವಿಸಿ ಜನಾದೇಶವನ್ನು ಅಪಮಾನಿಸಿದ್ದಾರೆ ಎಂದು ಹಿರಿಯ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.