ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾ ಶಿಬಿರದ ಮೇಲೆ ಆತ್ಮಹತ್ಯಾ ದಾಳಿ: ಮೂವರು ಯೋಧರು ಹುತಾತ್ಮ, ಇಬ್ಬರು ಫಿದಾಯಿನ್ ಸಾವು
ಜಮ್ಮು- ಕಾಶ್ಮೀರದ ಗಡಿ ಜಿಲ್ಲೆ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಗುರುವಾರ ಬೆಳಗಿನ ಜಾವ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿ ಇಬ್ಬರು ಫಿದಾಯಿನ್ ಉಗ್ರ ಆತ್ಮಹತ್ಯಾ ದಾಳಿಕೋರರು ಮೃತಪಟ್ಟಿದ್ದಾರೆ.
Published: 11th August 2022 08:22 AM | Last Updated: 11th August 2022 01:16 PM | A+A A-

ಸಾಂದರ್ಭಿಕ ಚಿತ್ರ
ಶ್ರೀನಗರ: ಜಮ್ಮು- ಕಾಶ್ಮೀರದ ಗಡಿ ಜಿಲ್ಲೆ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಗುರುವಾರ ಬೆಳಗಿನ ಜಾವ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿ ಇಬ್ಬರು ಫಿದಾಯಿನ್ ಉಗ್ರ ಆತ್ಮಹತ್ಯಾ ದಾಳಿಕೋರರು ಮೃತಪಟ್ಟಿದ್ದಾರೆ.
ಇಂದು ಮುಂಜಾನೆ ರಾಜೌರಿಯ ಪರ್ಗಲ್ ಪ್ರದೇಶದಲ್ಲಿ ಕತ್ತಲೆಯಲ್ಲಿ ಇಬ್ಬರು ಫಿದಾಯೀನ್‌ಗಳು ಸೇನಾ ಶಿಬಿರದೊಳಗೆ ನುಗ್ಗಲು ಯತ್ನಿಸಿದರು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿಯಲ್ಲಿ ನಿಯೋಜಿಸಲಾದ ಸೇನಾ ಸಿಬ್ಬಂದಿ ಉಗ್ರರನ್ನು ಪತ್ತೆಹಚ್ಚಿ ಅವರ ಮೇಲೆ ಗುಂಡು ಹಾರಿಸಿದ್ದಾರೆ.
ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್‌ನಲ್ಲಿ ಇಬ್ಬರು ಫಿದಾಯಿನ್ ಉಗ್ರರು ಹತ್ಯೆಗೊಂಡಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಬುದ್ಗಾಮ್ ಎನ್ಕೌಂಟರ್: ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ಆರೋಪಿ ಸೇರಿ ಮೂವರು ಎಲ್ಇಟಿ ಉಗ್ರರು ಹತ
ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ವಿಶೇಷ ಚಿಕಿತ್ಸೆಗಾಗಿ ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚುವರಿ ಸೇನೆ, ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇತ್ತೀಚಿನ ವರದಿ ಬರುವವರೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನಾ ಅಧಿಕಾರಿ ಹೇಳಿದರು. ಇಬ್ಬರು ಅಥವಾ ಹೆಚ್ಚಿನ ದಾಳಿಕೋರರು ಇದ್ದಾರೆಯೇ ಎಂಬುದು ತಿಳಿದಿಲ್ಲ. 75ನೇ ಸ್ವಾತಂತ್ರ್ಯ ದಿನಾಚರಣೆಗೆ ನಾಲ್ಕು ದಿನ ಬಾಕಿ ಇರುವಾಗಲೇ ಈ ದಾಳಿ ನಡೆದಿದೆ.