ಆ.14 ದೇಶ 'ವಿಭಜನೆಯ ಕರಾಳ ದಿನ' ಎಂದು ಬಿಜೆಪಿ ವಿಡಿಯೊ ಬಿಡುಗಡೆ: ಕಾಂಗ್ರೆಸ್ ತಿರುಗೇಟು

ಇಂದು ಆಗಸ್ಟ್ 14 ಭಾರತ-ಪಾಕಿಸ್ತಾನ ವಿಭಜನೆಗೊಂಡ ದಿನವನ್ನು ವಿಭಜನೆ ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. 
ಜವಹರಲಾಲ್ ನೆಹರೂ(ಸಂಗ್ರಹ ಚಿತ್ರ)
ಜವಹರಲಾಲ್ ನೆಹರೂ(ಸಂಗ್ರಹ ಚಿತ್ರ)

ನವದೆಹಲಿ: ಇಂದು ಆಗಸ್ಟ್ 14 ಭಾರತ-ಪಾಕಿಸ್ತಾನ ವಿಭಜನೆಗೊಂಡ ದಿನವನ್ನು ವಿಭಜನೆ ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. 

ದೇಶ ವಿಭಜನೆಯ ವೇಳೆ ಜನತೆ ಅನುಭವಿಸಿದ ಕಷ್ಟ ಮತ್ತು ತ್ಯಾಗಗಳನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ ೧೪ ರಂದು ಈ ದಿನ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು ಅವರನ್ನು  ಸ್ಮರಿಸಲಾಗುತ್ತದೆ. ’ವಿಭಜನೆಯ ಭಯಾನಕ ನೆನಪಿನ ದಿನ’ದ ಅಂಗವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶ ವಿಭಜನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಆಗಸ್ಟ್​ 14ನ್ನು ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ವರ್ಷವೇ ಘೋಷಣೆ ಮಾಡಿದ್ದರು. ಅದರಂತೆ ಬಿಜೆಪಿ ನಾಯಕರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ದಿನವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಿ ಟ್ವೀಟ್ ಮಾಡುತ್ತಿದ್ದಾರೆ.

ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು. ಈ ವಿಭಜನೆಯ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವುದರ ಜೊತೆಗೆ  ಬಂಗಾಳವನ್ನು ಕೂಡ ವಿಭಜಿಸಲಾಯಿತು. ಬಂಗಾಳದ ಪೂರ್ವ ಭಾಗವನ್ನು ಭಾರತದಿಂದ ಬೇರ್ಪಡಿಸಿ ಪೂರ್ವ ಪಾಕಿಸ್ತಾನವನ್ನು ರೂಪಿಸಲಾಯಿತು, ಅದು 1971 ರ ಯುದ್ಧದ ನಂತರ ಬಾಂಗ್ಲಾದೇಶವಾಯಿತು.

ಬಿಜೆಪಿ ವಿಡಿಯೊ ಬಿಡುಗಡೆ: ಈ ಬಾರಿ ‘ದೇಶ ವಿಭಜನೆಯ ಕರಾಳ ನೆನಪಿನ ದಿನ’ ಪ್ರಯುಕ್ತ ಬಿಜೆಪಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, 1947 ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಘಟನೆಗಳನ್ನು ವಿವರಿಸಿದೆ. ಹಿಂದಿನ ಘಟನೆಗಳ ವಿಡಿಯೊ ತುಣುಕು ಬಳಸಿ ಮತ್ತು ವಿಭಜನೆಯ ನಾಟಕೀಯ ದೃಶ್ಯಗಳಿರುವ ಏಳು ನಿಮಿಷಗಳ ವಿಡಿಯೊವು ಪಾಕಿಸ್ತಾನದ ರಚನೆಗಾಗಿ ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ನ ಬೇಡಿಕೆಗಳಿಗೆ ಜವಾಹರ್​​ಲಾಲ್ ನೆಹರು (Jawaharlal Nehru) ಒಪ್ಪಿರುವುದನ್ನು ವಿಡಿಯೊದಲ್ಲಿ ದೂಷಿಸಲಾಗಿದೆ. 

ಅದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಈ ದಿನವನ್ನು ಗುರುತಿಸುವ ಪ್ರಧಾನ ಮಂತ್ರಿಯ ನಿಜವಾದ ಉದ್ದೇಶ ಅತ್ಯಂತ ಆಘಾತಕಾರಿ ಐತಿಹಾಸಿಕ ಘಟನೆಗಳನ್ನು ತಮ್ಮ ಪ್ರಸ್ತುತ ರಾಜಕೀಯ ಹೋರಾಟಗಳಿಗೆ ಬಳಸಿಕೊಳ್ಳುವುದಾಗಿದೆ ಎಂದಿದ್ದಾರೆ. 

ವಿಭಜನೆಯ ದುರಂತವನ್ನು ದ್ವೇಷ ಮತ್ತು ಪೂರ್ವಗ್ರಹವನ್ನು ಉತ್ತೇಜಿಸಲು ದುರುಪಯೋಗ ಮಾಡಬಾರದು ಎಂದಿದ್ದಾರೆ. ಸತ್ಯ ಏನೆಂದರೆ ಎರಡು ದೇಶದ ಕಲ್ಪನೆ ಮಾಡಿದ್ದು ಸಾವರ್ಕರ್, ಜಿನ್ನಾ ಅದನ್ನು ಕಾರ್ಯಪ್ರವೃತ್ತ ಮಾಡಿದರು. ನಾವು ವಿಭಜನೆಯನ್ನು ಒಪ್ಪದೇ ಇದ್ದರೆ, ಭಾರತ ಹಲವಾರು ತುಂಡುಗಳಾಗಿ ವಿಭಜನೆಯಾಗಿ ಇಡೀ ನಾಶವಾಗಿ ಬಿಡುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಜನ ಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನೂ ನೆನಪಿಸಿಕೊಳ್ಳಬೇಕು. ಯಾಕೆಂದರೆ ಅವರು ಶರತ್ ಚಂದ್ರ ಬೋಸ್ ಅವರ ಆಗ್ರಹಕ್ಕೆ ವಿರುದ್ಧವಾಗಿ ಬಂಗಾಳವನ್ನು ವಿಭಜಿಸಿದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಗಾಂಧಿ, ನೆಹರು, ಪಟೇಲ್ ಮತ್ತು ರಾಷ್ಟ್ರವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಅವಿರತರಾಗಿದ್ದ ಅನೇಕರ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ದ್ವೇಷದ ರಾಜಕಾರಣವನ್ನು ಹಿಮ್ಮೆಟ್ಟಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com