"ಅತ್ಯಾಚಾರ ಸಂತ್ರಸ್ತರ ಮೇಲೆ ಆತಂಕಕಾರಿ ಪರಿಣಾಮ": ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆಗೆ ತೀವ್ರ ವಿರೋಧ, ಆದೇಶ ವಾಪಸ್ ಗೆ ಆಗ್ರಹ
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಮಹಿಳಾ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ ಒಟ್ತು 6,000 ಮಂದಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
Published: 18th August 2022 08:44 PM | Last Updated: 14th November 2022 01:15 PM | A+A A-

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಸ್ವಾಗತಿಸುತ್ತಿರುವುದು
ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಮಹಿಳಾ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ ಒಟ್ತು 6,000 ಮಂದಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವುದನ್ನು ವಿರೋಧಿಸಿದ್ದು, ಬಿಡುಗಡೆಯ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಾಮೂಹಿಕ ಅತ್ಯಾಚಾರದ ಪ್ರಕರಣದ 11 ಮಂದಿ ಅಪರಾಧಿಗಳ ಬಿಡುಗಡೆಯಿಂದಾಗಿ, ವ್ಯವಸ್ಥೆಯ ಮೇಲೆ ನಂಬಿಕೆ ಇಡಲು ಹೇಳುವ, ನ್ಯಾಯ ಕೇಳಲು ಮುಂದಾಗುವ ಹಾಗೂ ಭರವಸೆಯಿಡುವ ಅತ್ಯಾಚಾರ ಸಂತ್ರಸ್ತೆಯರ ಮೇಲೆ ಆತಂಕಕಾರಿ ಪರಿಣಾಮ ಉಂಟಾಗಲಿದೆ ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ.
ಕಾರ್ಯಕರ್ತೆ ಸಯೀದ ಅಹಮೀದ್, ಜಫರುಲ್-ಇಸ್ಲಾಂ ಖಾನ್, ರೂಪ್ ರೇಖಾ, ದೇವಕಿ ಜೈನ್, ಉಮಾ ಚಕ್ರವರ್ತಿ, ಸುಭಾಷಿಣಿ ಅಲಿ, ಕವಿತಾ ಕೃಷ್ಣನ್, ಮೈಮೂನಾ ಮೊಲ್ಲಾ, ಹಸೀನಾ ಖಾನ್, ರಚನಾ ಮುದ್ರಬೋಯಿನಾ, ಶಬ್ನಮ್ ಹಶ್ಮಿ ಸೇರಿದಂತೆ ಇತರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಇಂತಹ ರಾಜಕೀಯ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ: ಅತ್ಯಾಚಾರ ಆರೋಪಿಗಳಿಗೆ ಬಿಜೆಪಿ ಬೆಂಬಲಕ್ಕೆ ರಾಹುಲ್ ವಾಗ್ದಾಳಿ
ಸಹೇಲಿ ಮಹಿಳಾ ಸಂಪನ್ಮೂಲ ಕೇಂದ್ರ, ಗಮನ ಮಹಿಳಾ ಸಮೂಹ, ಬೇಬಾಕ್ ಕಲೆಕ್ಟಿವ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ, ಉತ್ತರಾಖಂಡ ಮಹಿಳಾ ಮಂಚ್, ಮಹಿಳಾ ದಬ್ಬಾಳಿಕೆ ವಿರುದ್ಧ ವೇದಿಕೆ, ಪ್ರಗತಿಶೀಲ ಮಹಿಳಾ ಮಂಚ್, ಪರ್ಚಮ್ ಕಲೆಕ್ಟಿವ್, ಜಾಗೃತಿ ಆದಿವಾಸಿ ದಲಿತ ಸಂಘಟನೆ, ಅಮೂಮತ್ ಸೊಸೈಟಿ, ವುಮ್‌ಕಾಮ್‌ಮ್ಯಾಟರ್ಸ್ ಮತ್ತು ಮಹಿಳಾ ಕೇಂದ್ರ ಸಹಿಯಾರ್ ಸೇರಿದಂತೆ ಹಲವು ನಾಗರಿಕ ಹಕ್ಕುಗಳ ಗುಂಪುಗಳು 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವುದನ್ನು ವಿರೋಧಿಸಿವೆ.
ಅಪರಾಧಿಗಳ ಬಿಡುಗಡೆಯನ್ನು ಹಿಂಪಡೆಯಬೇಕು, ಈ ರೀತಿಯ ಅತ್ಯಾಚಾರಿಗಳು, ಕೊಲೆಗಡುಗರ ಬಿಡುಗಡೆಯಿಂದ, ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಕೃತ್ಯಗಳನ್ನು ಎಸಗುವವರು ಬಲಿಷ್ಠರಾಗುತ್ತಾರೆ, ಮಹಿಳೆಯರು ನ್ಯಾಯಾಂಗದ ಮೇಲಿಟ್ಟಿರುವ ನಂಬಿಕೆ ಉಳಿಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.