ಓಪಿಎಸ್ ಕರೆ ತಿರಸ್ಕರಿಸಿದ ಇಪಿಎಸ್, ಮತ್ತೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಂ
ಮದ್ರಾಸ್ ಹೈಕೋರ್ಟ್ ಆದೇಶದಿಂದ ಐಐಎಡಿಎಂಕೆ ಪಕ್ಷದಲ್ಲಿ ಮತ್ತೊಂದು ತಿರುವು ಪಡೆದಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಓ. ಪನ್ನೀರಸೆಲ್ವಂ ಅಥವಾ ಒಪಿಎಸ್ ಅವರ ಕರೆಯನ್ನು ಎಐಎಡಿಎಂಕೆ ನಾಯಕ ಮತ್ತು ತಮಿಳುನಾಡು ಮಾಜಿ...
Published: 19th August 2022 06:56 PM | Last Updated: 19th August 2022 06:56 PM | A+A A-

ಪನ್ನೀರ ಸೆಲ್ವಂ - ಪಳನಿಸ್ವಾಮಿ
ಚೆನ್ನೈ: ಮದ್ರಾಸ್ ಹೈಕೋರ್ಟ್ ಆದೇಶದಿಂದ ಐಐಎಡಿಎಂಕೆ ಪಕ್ಷದಲ್ಲಿ ಮತ್ತೊಂದು ತಿರುವು ಪಡೆದಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಓ. ಪನ್ನೀರಸೆಲ್ವಂ ಅಥವಾ ಒಪಿಎಸ್ ಅವರ ಕರೆಯನ್ನು ಎಐಎಡಿಎಂಕೆ ನಾಯಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಶುಕ್ರವಾರ ತಿರಸ್ಕರಿಸಿದ್ದಾರೆ.
ಜುಲೈ 11 ರಂದು ಪಕ್ಷದಿಂದ ಅವರನ್ನು ಹೊರಹಾಕಿದ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯು ಕಾನೂನುಬಾಹಿರ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ ಒಂದು ದಿನದ ನಂತರ ಪನ್ನೀರಸೆಲ್ವಂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಮನವಿ ಮಾಡಿದ್ದರು.
ಇದನ್ನು ಓದಿ: ತಮಿಳುನಾಡು: ಪಳನಿಸ್ವಾಮಿ ಬಣಕ್ಕೆ ಭಾರೀ ಹಿನ್ನಡೆ; ಹೊಸದಾಗಿ ಎಐಎಡಿಎಂಕೆ ಕೌನ್ಸಿಲ್ ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶ
ಪಳನಿಸ್ವಾಮಿ ಅಥವಾ ಇಪಿಎಸ್ ಅವರನ್ನು ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಮಾಡಿದ್ದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ ಮತ್ತು ಜೂನ್ 23, 2022 ರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಆದೇಶಿಸಿತ್ತು. ಆ ಮೂಲಕ ನ್ಯಾಯಾಲಯದ ಆದೇಶ ಪಕ್ಷದಲ್ಲಿ ದ್ವಿ-ನಾಯಕತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಿದೆ. ಆದರೆ ಹೈಕೋರ್ಟ್ ಏಕ ಸದಸ್ಯ ಪೀಠದ ಈ ಆದೇಶವನ್ನು ಪ್ರಶ್ನಿಸಿ ಪಳನಿಸ್ವಾಮಿ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಉಭಯ ನಾಯಕರು ಜಂಟಿಯಾಗಿ ಜನರಲ್ ಕೌನ್ಸಿಲ್ ಸಭೆಗೆ ಕರೆ ನೀಡಬೇಕೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಒಂದು ವೇಳೆ ಕೌನ್ಸಿಲ್ ಸದಸ್ಯರಲ್ಲಿ ಐದನೇ ಒಂದು ಭಾಗದ ಸದಸ್ಯರು ಸಭೆಗೆ ಒತ್ತಾಯಿಸಿದರೂ ಸಭೆ ಕರೆಯಬೇಕೆಂದು ಕೋರ್ಟ್ ಹೇಳಿದೆ.
ಒಪಿಎಸ್ ಮನವಿಗೆ ಪ್ರತಿಕ್ರಿಯಿಸಿದ ಇಪಿಎಸ್, “ಪಕ್ಷದ ಕೇಂದ್ರ ಕಚೇರಿಗೆ ರೌಡಿಗಳನ್ನು ಕರೆತಂದ ಮತ್ತು ಎಐಎಡಿಎಂಕೆ ಕಾರ್ಯಕರ್ತರಿಂದ ದೇವಸ್ಥಾನವೆಂದು ಪರಿಗಣಿಸಲ್ಪಟ್ಟ ಸ್ಥಳದಲ್ಲಿ ಬೆಂಕಿ ಹಚ್ಚಿದವರೊಂದಿಗೆ ನಾನು ಹೇಗೆ ಕೆಲಸ ಮಾಡಲಿ?” ಎಂದು ಓಪಿಎಸ್ ವಿರುದ್ಧ ಗುಡುಗಿದ್ದಾರೆ.