ಕಚ್ಚಾ ತೈಲ ಬೆಲೆ 10 ತಿಂಗಳಲ್ಲೇ ಕಡಿಮೆ, ಆದರೂ ಪೆಟ್ರೋಲ್, ಡೀಸೆಲ್ ದರ ಇಳಿಸದ ಕೇಂದ್ರ: ಕಾಂಗ್ರೆಸ್ ವಾಗ್ದಾಳಿ

ಕಚ್ಚಾ ತೈಲ ಬೆಲೆ ಕಳೆದ 10 ತಿಂಗಳಲ್ಲೇ ಅತೀ ಕಡಿಮೆಯಾಗಿದೆ. ಆದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸದೆ ಜನರ ಲೂಟಿ  ಮುಂದುವರೆಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷ ರಾಹುಲ್...
ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿರುವ ಚಿತ್ರ
ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿರುವ ಚಿತ್ರ

ನವದೆಹಲಿ: ಕಚ್ಚಾ ತೈಲ ಬೆಲೆ ಕಳೆದ 10 ತಿಂಗಳಲ್ಲೇ ಅತೀ ಕಡಿಮೆಯಾಗಿದೆ. ಆದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸದೆ ಜನರ ಲೂಟಿ  ಮುಂದುವರೆಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

"ಮೇ 16, 2014 ರಂದು(ದೆಹಲಿ) - ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 107.09 ಡಾಲರ್ ಇತ್ತು. ಆಗ ಪೆಟ್ರೋಲ್ - ಪ್ರತಿ ಲೀಟರ್ 71.51 ರೂ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ 57.28. ಇತ್ತು. ಡಿಸೆಂಬರ್ 1, 2022 ರಂದು - ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 87.55. ಡಾಲರ್ ಗೆ ಇಳಿಕೆಯಾಗಿದೆ. ಇದು ಕಳೆದ 10 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಆದರೂ ಪೆಟ್ರೋಲ್ ಬೆಲೆ 96 ರೂ. ಮತ್ತು ಡೀಸೆಲ್ ಬೆಲೆ 89 ರೂಪಾಯಿ ಇದ್ದು, ಬಿಜೆಪಿಯ ಲೂಟಿ ಇನ್ನೂ ಹೆಚ್ಚಾಗಿದೆ! ಎಂದು ಖರ್ಗೆ ಟ್ವೀಟ್ ಮಾಡಿದೆ.

ಜಾಗತಿಕ ಕಚ್ಚಾ ತೈಲ ದರ ಶೇ.25ರಷ್ಟು ಇಳಿಕೆಯಾಗಿದ್ದರೂ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸರ್ಕಾರ ಒಂದೇ ಒಂದು ರೂಪಾಯಿ ಇಳಿಕೆ ಮಾಡಿಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಜನರು ದುಬಾರಿ ಹಣದುಬ್ಬರದಿಂದ ಬಳಲುತ್ತಿರುವಾಗ ಪ್ರಧಾನಿಯವರು ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಮೂಲಕ ಹಣ ವಸೂಲಿ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕಳೆದ 6 ತಿಂಗಳಲ್ಲಿ ಕಚ್ಚಾ ತೈಲವು ಶೇ.25 ಕ್ಕಿಂತ ಹೆಚ್ಚು ಅಗ್ಗವಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 10 ರೂ.ಗಿಂತ ಹೆಚ್ಚು ಕಡಿಮೆ ಮಾಡಬಹುದು. ಆದರೆ ಸರ್ಕಾರ ಒಂದೇ ಒಂದು ರೂಪಾಯಿಯನ್ನು ಕಡಿಮೆ ಮಾಡಿಲ್ಲ," ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com