ಚಳಿಗಾಲದ ಸಂಸತ್ ಅಧಿವೇಶನ: ನಿರುದ್ಯೋಗ, ಬೆಲೆ ಏರಿಕೆ ಕುರಿತು ಚರ್ಚಿಸಲು ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳ ಆಗ್ರಹ
ಸಂಸತ್ತಿನ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ಹಾಗೂ ಲೋಕಸಭೆಯ ಉಪ ನಾಯಕ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಯಿತು.
Published: 06th December 2022 04:08 PM | Last Updated: 06th December 2022 05:11 PM | A+A A-

ಸರ್ವಪಕ್ಷ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರರ ಚಿತ್ರ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ಹಾಗೂ ಲೋಕಸಭೆಯ ಉಪ ನಾಯಕ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಯಿತು.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಮುರುಳೀಧರನ್ ಮತ್ತು ಅರ್ಜುನ್ ರಾಮ್ ಮೇಘಾವಾಲ್, ಪಿಯೂಸ್ ಗೋಯೆಲ್ ಸರ್ಕಾರದ ಪರವಾಗಿ ಸಭೆಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ಪಕ್ಷದಿಂದ ಅಧೀರ್ ರಂಜನ್ ಚೌಧರಿ, ಟಿಎಂಸಿಯಿಂದ ಸುದೀಪ್ ಬಂಡೋಪಾಧ್ಯಾಯ, ಡೆರಿಕ್ ಓ ಬ್ರಿಯಾನ್, ಡಿಎಂಕೆಯಿಂದ ಟಿಆರ್ ಬಾಲು, ಎನ್ ಸಿಪಿಯ ಡಾ. ಫಾರೂಖ್ ಅಬ್ದುಲ್ಲಾ ಮತ್ತಿತರ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ. 10 ರಷ್ಟು ಮೀಸಲಾತಿ ಮತ್ತಿತರ ವಿಚಾರ ಕುರಿತು ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಮತ್ತು ಟಿಎಂಸಿ ಮುಖಂಡರು ಒತ್ತಾಯಿಸಿದರು. ಸರ್ಕಾರದಿಂದ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ, ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಪ್ರಸ್ತಾಪಿಸಿತು.
ಇದನ್ನೂ ಓದಿ: ಡಿಸೆಂಬರ್ 7 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: 16 ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ
ನಿಯಮಗಳ ಪ್ರಕಾರ, ಎಲ್ಲಾ ವಿಚಾರಗಳ ಕುರಿತು ಚರ್ತಿಸಲು ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 7 ರಿಂದ ಆರಂಭವಾಗಲಿದ್ದು, ಡಿಸೆಂಬರ್ 29ರವರೆಗೂ ಮುಂದುವರೆಯಲಿದೆ.