ನನ್ನ ಮಗಳನ್ನು ಕೊಂದ ಅಫ್ತಾಬ್ ನನ್ನು ನೇಣಿಗೇರಿಸಬೇಕು: ಶ್ರದ್ಧಾ ವಾಕರ್ ತಂದೆ
ದೆಹಲಿಯಲ್ಲಿ ತನ್ನ ಮಗಳನ್ನು ಭೀಕರವಾಗಿ ಕೊಲೆ ಮಾಡಿದ ಆಫ್ತಾಬ್ ಪೂನಾವಾಲಾನನ್ನು ನೇಣಿಗೇರಿಸಬೇಕು ಹತ್ಯೆಗೀಡಾದ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಅವರು ಶುಕ್ರವಾರ ಒತ್ತಾಯಿಸಿದ್ದಾರೆ.
Published: 09th December 2022 03:27 PM | Last Updated: 09th December 2022 04:48 PM | A+A A-

ಅಫ್ತಾಬ್ ಅಮೀನ್ ಪೂನಾವಾಲಾ
ಮುಂಬೈ: ದೆಹಲಿಯಲ್ಲಿ ತನ್ನ ಮಗಳನ್ನು ಭೀಕರವಾಗಿ ಕೊಲೆ ಮಾಡಿದ ಆಫ್ತಾಬ್ ಪೂನಾವಾಲಾನನ್ನು ನೇಣಿಗೇರಿಸಬೇಕು ಹತ್ಯೆಗೀಡಾದ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಅವರು ಶುಕ್ರವಾರ ಒತ್ತಾಯಿಸಿದ್ದಾರೆ.
ಇಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರದ್ಧಾ ತಂದೆ ವಿಕಾಸ್ ವಾಕರ್, "ನನ್ನ ಮಗಳನ್ನು ಕೊಂದ ಅಫ್ತಾಬ್ ಪೂನಾವಾಲಾಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪೂನಾವಾಲಾ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
"ಶ್ರದ್ಧಾ ನೀಡಿದ ದೂರಿನ ಬಗ್ಗೆ ತನಿಖೆ ನಡೆಸದೆ ವಿಳಂಬ ಮಾಡಿದ ವಸೈ ಮತ್ತು ನಲಸೋಪಾರ ಹಾಗೂ ತುಳಿಂಜ್(ಪಾಲ್ಘರ್ ಜಿಲ್ಲೆಯ) ಪೊಲೀಸ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು. ಅವರು ತಕ್ಷಣ ಕ್ರಮ ಕೈಗೊಂಡಿದ್ದರೆ, ನನ್ನ ಮಗಳು ಬದುಕುತ್ತಿದ್ದಳು" ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಶ್ರದ್ಧಾ ಹತ್ಯೆ ಪ್ರಕರಣ: ಆರೋಪಿ ಅಫ್ತಾಬ್ ಪೂನಾವಾಲಾ ನ್ಯಾಯಾಂಗ ಬಂಧನ 14 ದಿನ ವಿಸ್ತರಣೆ
ಶ್ರದ್ಧಾ ವಾಕರ್ ಅವರು ನವೆಂಬರ್ 2020ರಲ್ಲಿ ತುಳಿಂಜ್ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಅದರಲ್ಲಿ "ಪೂನಾವಾಲಾ ನನ್ನನ್ನು ನಿಂದಿಸುತ್ತಿದ್ದಾನೆ ಮತ್ತು ನನ್ನನ್ನು ಥಳಿಸುತ್ತಿದ್ದಾನೆ. ಇಂದು ಅವನು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದನು ಮತ್ತು ಅವನು ನನ್ನನ್ನು ಕೊಲ್ಲುತ್ತೇನೆ, ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದು ಎಂದು ಹೆದರಿಸುತ್ತಿದ್ದಾನೆ ಎಂದು ಆರೋಪಿಸಿದ್ದರು.
ದೆಹಲಿ ಗವರ್ನರ್ ಮತ್ತು ದೆಹಲಿ ದಕ್ಷಿಣ ಡಿಸಿಪಿ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಫಡ್ನವಿಸ್ ಅವರು ನನಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ವಿಕಾಸ್ ವಾಕರ್ ಹೇಳಿದ್ದಾರೆ.
ಅಫ್ತಾಬ್ ಪೂನಾವಾಲಾ ತನ್ನೊಂದಿಗೆ ಲಿವ್ ಇನ್ ರಿಲೇಶನ್ ಶಿಫ್ ನಲ್ಲಿದ್ದ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಸುಮಾರು ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟಿದ್ದನು.