ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಪ್ರಾಮುಖ್ಯತೆಯಿಲ್ಲ: ಬಿಹಾರ ಸಿಎಂ ನಿತೀಶ್ ಕುಮಾರ್

"2024 ರಲ್ಲಿ ಬಿಜೆಪಿ ವಿರುದ್ಧ 'ಮುಖ್ಯ ರಂಗ' ಮಾತ್ರ ಇರುವುದರಿಂದ ಮೂರನೇ ರಂಗಕ್ಕೆ ಯಾವುದೇ ಅವಕಾಶವಿಲ್ಲ" ಎಂದು ಹೇಳಿದರು. ಬಿಜೆಪಿ ವಿರೋಧಿ ಪಕ್ಷಗಳು ಒಂದೇ ವೇದಿಕೆಯಲ್ಲಿ ಬಂದರೆ 2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲ್ಲಬಹುದು ಎಂದರು
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದಾರೆ, ಆದರೆ ಅವರ ಆಪ್ತರು ಇದರ ಬಗ್ಗೆ ಪದೇ ಪದೇ ಚರ್ಚಿಸುತ್ತಿದ್ದಾರೆ. ನಾಯಕತ್ವದ ವಿಚಾರದಲ್ಲಿ ಜೆಡಿ(ಯು) ಕಠಿಣ ನಿಲುವು ತೆಗೆದುಕೊಳ್ಳಬಹುದೇ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ರಾಜ್ಯ ರಾಜಧಾನಿಯಲ್ಲಿ ಭಾನುವಾರ ಜೆಡಿ-ಯು ಸರ್ವಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ನಿತೀಶ್, "2024 ರಲ್ಲಿ ಬಿಜೆಪಿ ವಿರುದ್ಧ 'ಮುಖ್ಯ ರಂಗ' ಮಾತ್ರ ಇರುವುದರಿಂದ ಮೂರನೇ ರಂಗಕ್ಕೆ ಯಾವುದೇ ಅವಕಾಶವಿಲ್ಲ" ಎಂದು ಹೇಳಿದರು. ಬಿಜೆಪಿ ವಿರೋಧಿ ಪಕ್ಷಗಳು ಒಂದೇ ವೇದಿಕೆಯಲ್ಲಿ ಬಂದರೆ 2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲ್ಲಬಹುದು ಎಂದರು.

ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟಿನಿಂದ ಇದ್ದರೆ 2024ರಲ್ಲಿ ನಾವು ಗರಿಷ್ಠ ಸ್ಥಾನಗಳನ್ನು ಗೆಲ್ಲಬಹುದು. ನಾವು ಮೂರನೇ ರಂಗವಾಗಲು ಇಷ್ಟಪಡುವುದಿಲ್ಲ. ನಮ್ಮದು ಮುಖ್ಯ ರಂಗ" ಎಂದು ಪ್ರತಿಪಾದಿಸಿದರು.

ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ಸಂಯುಕ್ತ ಜನತಾದಳ, ಆರ್‍ಜೆಡಿ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಕಳೆದ ಆಗಸ್ಟ್‌ನಲ್ಲಿ ಸರ್ಕಾರ ರಚಿಸಿತ್ತು. ಆ ಬಳಿಕ ನಿತೀಶ್, ಕೇಸರಿ ಪಕ್ಷದ ಪ್ರಬಲ ಟೀಕಾಕಾರರಾಗಿದ್ದಾರೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ನಮ್ಮ ಮೈತ್ರಿ ಪಕ್ಷವಾಗಿದ್ದರೂ ನಮ್ಮ ವಿರುದ್ಧ ಕೆಲಸ ಮಾಡಿತ್ತು ಎಂದು ಅವರು ಆಪಾದಿಸಿದರು.

2020ರ ಚುನಾವಣೆಯಲ್ಲಿ ನಮ್ಮ ಪಕ್ಷ ಕಡಿಮೆ ಸ್ಥಾನಗಳನ್ನು ಗೆದ್ದಿತು. ಮೈತ್ರಿಯ ಹೊರತಾಗಿಯೂ ಬಿಜೆಪಿ ನಮ್ಮ ಸೋಲು ಖಾತರಿಪಡಿಸುವಲ್ಲಿ ನಿರತವಾಗಿತ್ತು ಎಂದು ಜೆಡಿಯು ಮುಖಂಡ ದೂರಿದರು. ಇದಕ್ಕೂ ಮುನ್ನ ಎಂದೂ ನಮ್ಮ ಪಕ್ಷ ಇಷ್ಟು ಕನಿಷ್ಠ ಸ್ಥಾನಗಳನ್ನು ಗೆದ್ದಿಲ್ಲ. ಅವರು ನಮ್ಮ ಪಕ್ಷದ ಅಭ್ಯರ್ಥಿಗಳ ಸೋಲು ಖಾತರಿಪಡಿಸಲು ಪ್ರಯತ್ನಿಸಿದ್ದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲೂ ಬಂಡಾಯಕ್ಕೆ ಬಿಜೆಪಿ ಕುಮ್ಮಕ್ಕು ನೀಡಿತು. ಮುಂದಿನ ಚುನಾವಣೆಯಲ್ಲಿ ಜನತೆ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಪುನರುಚ್ಚರಿಸಿದ ಸಿಎಂ, ಬಿಹಾರಕ್ಕೆ ಕೇಂದ್ರದಿಂದ ಎಲ್ಲಾ ಸಹಾಯವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದರು. ಬಡ ರಾಜ್ಯಗಳು ಅಭಿವೃದ್ಧಿಯಾಗುವವರೆಗೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ತರಲು ಸಾಧ್ಯವಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com