
ರಾಜ್ಯಸಭೆ ಕಲಾಪ
ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಡಿ.09 ರಂದು ನಡೆದ ಘರ್ಷಣೆಯ ವಿಷಯವಾಗಿ ಚರ್ಚೆ ನಡೆಸಲು ವಿಪಕ್ಷಗಳು ಸಂಸತ್ ಕಲಾಪದಲ್ಲಿ ಆಗ್ರಹಿಸಿವೆ.
ಇದೇ ವಿಷಯವಾಗಿ ರಾಜ್ಯಸಭೆ ಕಲಾಪದಲ್ಲಿ ಕೋಲಾಹಲ ಉಂಟಾಗಿ ಚರ್ಚೆಯ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಲಾಪದಿಂದ ವಿಪಕ್ಷಗಳು ಹೊರನಡೆದಿವೆ.
ಇದನ್ನೂ ಓದಿ: 2020ರಲ್ಲಿ ಚೀನಾಕ್ಕೆ ಮೋದಿ ಜೀ ಕ್ಲೀನ್ ಚಿಟ್ ನೀಡಿರುವ ಕುರಿತ ರಹಸ್ಯವೇನು?: ತವಾಂಗ್ ಘರ್ಷಣೆ ಕುರಿತು ಕಾಂಗ್ರೆಸ್ ಪ್ರಶ್ನೆ
ರಾಜ್ಯಸಭೆಯ ವಿಪಕ್ಷ ನಾಯಕ ಹಾಗು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷಗಳು ಭಾರತದ ನೆಲದಲ್ಲಿ ಚೀನಾ ಆಕ್ರಮಣಶೀಲತೆ ಮತ್ತು ಅತಿಕ್ರಮಣದ ವಿಷಯವಾಗಿ ಸಂಸತ್ ನಲ್ಲಿ ಚರ್ಚೆ ನಡೆಸಲು ಒತ್ತಾಯಿಸಿದ್ದವು, ಆದರೆ ಉಪಸಭಾಪತಿ ಹರಿವಂಶ್ ಅವರು ಚರ್ಚೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ನೊಟೀಸ್ ಬಂದಿಲ್ಲ, ಆದ್ದರಿಂದ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತವಾಂಗ್ ಚೀನಾ-ಭಾರತ ಯೋಧರ ಘರ್ಷಣೆ ಕುರಿತ ರಾಜನಾಥ್ ಸಿಂಗ್ ಹೇಳಿಕೆ ಅಪೂರ್ಣ, ಮೋದಿ ಸರ್ಕಾರ ಸತ್ಯ ಮರೆಮಾಚಿದೆ: ಕಾಂಗ್ರೆಸ್
ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎನ್ ಸಿಪಿ, ಆರ್ ಜೆಡಿ, ಎಸ್ ಪಿ, ಜೆಎಂಎಂ, ಶಿವಸೇನೆ ಸೇರಿದಂತೆ ವಿಪಕ್ಷಗಳ ಸಂಸದರು ಸಭಾತ್ಯಾಗಕ್ಕೂ ಮುನ್ನ ಘೋಷಣೆ ಕೂಗಿದರು.
"ತವಾಂಗ್ ಸೆಕ್ಟರ್ ನಲ್ಲಿ ನಡೆದ ಭಾರತ-ಚೀನಾ ಸಿಬ್ಬಂದಿಗಳ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಹೇಳಿಕೆಯಲ್ಲಿ ಗಡಿಗೆ ಸಂಬಂಧಿಸಿದ ವಾಸ್ತವ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ, ಘರ್ಷಣೆಯ ವಿಷಯದ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿದೆ" ಎಂದು ವಿಪಕ್ಷ ನಾಯಕ ಖರ್ಗೆ ಆಗ್ರಹಿಸಿದ್ದಾರೆ. "ಚೀನಾ ಖಾಲಿ ಜಾಗದಲ್ಲಿ ಸೇತುವೆಗಳನ್ನು ನಿರ್ಮಿಸಿದೆ ಎಂಬ ಮಾಹಿತಿ ಇದೆ, ಆರಂಭದಿಂದಲೂ ಪೂರ್ಣ ಮಾಹಿತಿ ಪಡೆಯುವುದಕ್ಕೆ ನಾವು ಶ್ರಮಿಸುತ್ತಿದ್ದೇವೆ, ದೇಶಕ್ಕೆ ಗಡಿಯಲ್ಲಿನ ಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು" ಎಂದು ಖರ್ಗೆ ಹೇಳಿದ್ದಾರೆ.