ಮೋದಿ ವಿರುದ್ಧ ಹೇಳಿಕೆ: ಬಿಲಾವಲ್ ಭುಟ್ಟೋ ತಲೆಗೆ 2 ಕೋಟಿ ರೂ. ಬಹುಮಾನ ಘೋಷಿಸಿದ ಬಿಜೆಪಿ ಮುಖಂಡ
ಬಾಗ್ ಪತ್: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಶಿರಚ್ಛೇದ ಮಾಡಿದವರಿಗೆ ಎರಡು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಬಿಜೆಪಿ ಮುಖಂಡರೊಬ್ಬರು ಶನಿವಾರ ಘೋಷಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ನಿಮ್ಮ ದೇಶ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ ಭುಟ್ಟೋ, ಭಾರತ ಎರಡೂ ದೇಶಗಳಲ್ಲಿನ ಮುಸ್ಲಿಮರನ್ನು ಭಯೋತ್ಪಾದಕರೊಂದಿಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಅಲ್ಲದೆ "ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್‌ನ ಕಟುಕ ಇನ್ನೂ ಬದುಕಿದ್ದಾನೆ ಮತ್ತು ಆತ ಭಾರತದ ಪ್ರಧಾನ ಮಂತ್ರಿ" ಎಂದಿದ್ದರು.
ಬಿಲಾವಲ್ ಹೇಳಿಕೆ ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಾಗ್‌ಪತ್ ಜಿಲ್ಲಾ ಪಂಚಾಯ್ತಿಯ ಬಿಜೆಪಿ ಸದಸ್ಯ ಮನುಪಾಲ್ ಬನ್ಸಾಲ್, ಪಾಕ್ ಸಚಿವರ ತಲೆಗೆ ಬಹುಮಾನ ಘೋಷಣೆ ಮಾಡಿದ್ದಾರೆ.
ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೊ ಶಿರಚ್ಛೇದ ಮಾಡುವವರು ಯಾರೇ ಆಗಲಿ ಅವರಿಗೆ ನಾನು 2 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಬನ್ಸಾಲ್ ಹೇಳಿದ್ದಾರೆ. ಈ ಘೋಷಣೆಗೆ ಮೆಚ್ಚುಗೆ ಸೂಚಿಸಿರುವ ನೆರೆದಿದ್ದ ಗುಂಪು ‘ಮನುಪಾಲ್ ಬನ್ಸಾಲ್ ಜಿಂದಾಬಾದ್’ ಎಂದು ಘೋಷಣೆ ಕೂಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ